ಉಳ್ಳಾಲ, ನ. 02 (DaijiworldNews/AA): ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ಕೈಗೆತ್ತಿಕೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಚಾಲನೆ ನೀಡಿದ್ದಾರೆ.




ಉಳ್ಳಾಲದ ಉಳ್ಳಾಲಬೈಲ್ ವೈದ್ಯನಾಥ ನಗರದ 1ನೇ ಅಡ್ಡ ರಸ್ತೆಯನ್ನು ಲೋಕಾರ್ಪಣೆಗೊಳಿಸಿದ್ದಾರೆ. ಅದೇರೀತಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 18 ಲಕ್ಷ ರೂ. ಅನುದಾನದಲ್ಲಿ ಉಳ್ಳಾಲದ ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಹಾಗೂ ಸೋಮೇಶ್ವರ ಬೀಚ್ಗೆ ಭೇಟಿ ನೀಡುವವರ ಉಪಯೋಗಕ್ಕಾಗಿ ನಿರ್ಮಾಣಗೊಳ್ಳಲಿರುವ ಶೌಚಾಲಯದ ಗುದ್ದಲಿ ಪೂಜೆಯನ್ನು ಕೂಡ ಸಂಸದರು ನೆರವೇರಿಸಿದ್ದಾರೆ.
ಅಲ್ಲದೆ, ಮುಡಿಪುವಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ನಡೆದ ಎರಡು ಕೊಠಡಿಗಳ ನಿರ್ಮಾಣದ ಕಾಮಗಾರಿಯ ಗುದ್ದಲಿ ಪೂಜೆಯನ್ನು ಕೂಡ ಸಂಸದ ಕ್ಯಾ. ಚೌಟ ಅವರು ಇದೇ ಸಂದರ್ಭದಲ್ಲಿ ನೆರವೇರಿಸಿದ್ದಾರೆ.
ವಿಶ್ವ ಯೋಗ ದಿನಾಚರಣೆ ಹಿನ್ನಲೆಯಲ್ಲಿ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದಿದ್ದ 'ಯೋಗ ವಿತ್ ಯೋಧ' ಕಾರ್ಯಕ್ರಮದಲ್ಲಿ ಸಂಸದ ಕ್ಯಾ. ಚೌಟ ಅವರು ಪಾಲ್ಗೊಂಡಿದ್ದರು. ಈ ವೇಳೆ, ದೇವಸ್ಥಾನದ ಆಡಳಿತ ಮಂಡಳಿಯವರು ಕೆಲವು ಮೂಲಸೌಕರ್ಯ ಒದಗಿಸುವ ಕುರಿತ ಬೇಡಿಕೆಯನ್ನು ಸಂಸದರಿಗೆ ಸಲ್ಲಿಸಿದ್ದರು. ಇದಕ್ಕೆ ಶೀಘ್ರವಾಗಿ ಸ್ಪಂದಿಸಿರುವ ಕ್ಯಾ. ಚೌಟ ಅವರು ತಮ್ಮ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಹಣ ಬಿಡುಗಡೆಗೊಳಿಸಿ ಕಾಮಗಾರಿಗೆ ಇಂದು ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಜಗದೀಶ್ ಆಳ್ವ, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್, ಸೋಮೇಶ್ವರ ಪುರಸಭೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾದ ಕಮಲ ಮತ್ತು ರವಿಶಂಕರ್ ಸೋಮೇಶ್ವರ, ಕೋಟೆಕಾರ್ ಪಟ್ಟಣ ಪಂಚಾಯತ್ ಅಧ್ಯಕ್ಷರು ದಿವ್ಯ ಶೆಟ್ಟಿ, ಸೋಮೇಶ್ವರ ದೇವಸ್ಥಾನ ಟ್ರಸ್ಟಿ ಸದಾಶಿವ ಬಂಗೇರ, ಕಿಶೋರ್, ದೇವಸ್ಥಾನದ ಆಡಳಿತಾಧಿಕಾರಿ ಬೇಬಿ, ಬಿಜೆಪಿ ಮುಖಂಡರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ದಿನೇಶ್ ಅಮ್ಟೂರು, ಚಂದ್ರಶೇಖರ ಉಚ್ಚಿಲ, ದಯಾನಂದ ತೊಕ್ಕೊಟ್ಟು, ನವೋದಯ ವಿದ್ಯಾಲಯ ಪ್ರಾಂಶುಪಾಲ ರಾಜೇಶ್, ಉಳ್ಳಾಲ ನಗರಸಭೆ ಸದಸ್ಯರು ಮತ್ತು ಸ್ಥಳೀಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.