ಕಡಬ, ನ. 02 (DaijiworldNews/AA): ಮೀನು ಮಾರಾಟಕ್ಕೆ ಸಂಬಂಧಿಸಿದಂತೆ ನಡೆದ ಮಾತಿನ ಚಕಮಕಿ ಎರಡು ಗುಂಪಿನ ಮೀನು ಮಾರಾಟಗಾರರ ನಡುವೆ ಘರ್ಷಣೆಗೆ ಕಾರಣದ ಘಟನೆ ಕಡಬ ಗ್ರಾಮದ ಸಂತೆಕಟ್ಟೆ ಮೀನು ಮಾರುಕಟ್ಟೆ ಬಳಿ ನವೆಂಬರ್ 1 ರಂದು ನಡೆದಿದೆ.

ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇಬ್ಬರು ಅಂಗಡಿ ಮಾಲೀಕರ ನಡುವೆ ನಡೆದ ತೀವ್ರ ವಾಗ್ವಾದವು ಹೊಡೆದಾಟವಾಗಿ ತಿರುಗಿರುವುದನ್ನು ಕಾಣಬಹುದಾಗಿದೆ. ವಿಡಿಯೋ ಪರಿಶೀಲನೆ ನಡೆಸಿದ ಕಡಬ ಪೊಲೀಸ್ ಉಪ-ನಿರೀಕ್ಷಕ ಅಭಿನಂದನ್ ಎಂ.ಎಸ್. ಅವರು, ಅಂಗಡಿ ಮಾಲೀಕರಾದ ರಾಜು ಮ್ಯಾಥ್ಯೂ ಮತ್ತು ಆಡಮ್ ಅವರ ನಡುವೆ ಮೀನು ಮಾರಾಟದ ವಿಚಾರವಾಗಿ ವಾದ-ವಿವಾದ ನಡೆದಿದ್ದು, ಬಳಿಕ ರಾಜು ಮ್ಯಾಥ್ಯೂ, ಆಡಮ್, ಫಯಾಜ್, ರಕ್ಷಿತ್ ಮಣಿ, ಮತ್ತು ನೌಫಾಲ್ ಎಂಬ ಐವರು ಗಲಾಟೆಯಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದ್ದಾರೆ.
ಈ ಘರ್ಷಣೆಯು ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತಂದ ಕಾರಣ, ಕಡಬ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ 2023 ರ ಕಲಂ 194(2) ಅಡಿಯಲ್ಲಿ ಪ್ರಕರಣ (ಅಪರಾಧ ಸಂಖ್ಯೆ: 73/2025) ದಾಖಲಿಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ.