ಉಡುಪಿ, ನ. 02 (DaijiworldNews/TA): ನಾನು ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತೆ. ನವೆಂಬರ್ ತಿಂಗಳ ಕ್ರಾಂತಿ, ಶಾಂತಿ ಎಲ್ಲವೂ ಹೈಕಮಾಂಡ್ಗೆ ಬಿಟ್ಟ ವಿಚಾರ. ಸಚಿವ ಸಂಪುಟದಲ್ಲಿ ಬದಲಾವಣೆ ಎಐಸಿಸಿ ಅಧ್ಯಕ್ಷರಿಗೆ ಬಿಟ್ಟ ವಿಚಾರ. ನನ್ನ ಸಹಿತ ಎಲ್ಲರೂ ಪಕ್ಷ ಹೇಳಿದ್ದನ್ನು ಕೇಳುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಉಡುಪಿ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭದ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಸಚಿವರು, ಮುಖ್ಯಮಂತ್ರಿ ಬದಲಾವಣೆ ಎಐಸಿಸಿ ಅಧ್ಯಕ್ಷರಿಗೆ ಬಿಟ್ಟ ವಿಚಾರ. ನಾನು ಸೇರಿದಂತೆ ಎಲ್ಲರೂ ಪಕ್ಷ ಹೇಳಿದಂತೆ ಕೇಳುತ್ತೇವೆ. ಪಕ್ಷ ನನ್ನನ್ನು ಗುರುತಿಸಿ ಜನರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದೆ. ನಿಮ್ಮ ಕೆಲಸ ಬೇರೆ ಇದೆ ಎಂದು ಪಕ್ಷ ಸೂಚಿಸಿದರೆ ಸಂತೋಷದಿಂದ ಅದನ್ನು ಕೇಳುತ್ತೇವೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೈಕಮಾಂಡ್ ಮಾತಿನಂತೆ ನಡೆದುಕೊಳ್ಳುವ ವ್ಯಕ್ತಿ. ಸೋನಿಯಾ ಗಾಂಧಿ ಅವರ ತ್ಯಾಗದ ಮಾತನ್ನು ಬಹಳಷ್ಟು ಸಾರಿ ಹೇಳಿದ್ದಾರೆ.
ಇದಕ್ಕೆ ವಿಶೇಷ ಅರ್ಥವನ್ನು ಕಲ್ಪಿಸುವುದು ಬೇಡ. ಗಾಂಧಿ ಪರಿವಾರದ ಇಂದಿರಾಗಾಂಧಿ, ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ಇತಿಹಾಸದ ಬಗ್ಗೆ ನಮಗೆಲ್ಲ ಗೊತ್ತಿದೆ. ನವೆಂಬರ್ ಕ್ರಾಂತಿ ಎಂಬುದು ಬರೇ ಭ್ರಾಂತಿಯಷ್ಟೇ ಎಂದಿರುವ ಸಚಿವ ಹೆಚ್.ಸಿ ಮಹಾದೇವಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವೆ, ಅವರು ನಮ್ಮ ಪಕ್ಷದ ಹಿರಿಯ ಮುಖಂಡರು, ಸಂಪುಟದಲ್ಲಿ ಅತ್ಯಂತ ಬುದ್ಧಿವಂತ ಮಂತ್ರಿ. ಅವರೇನು ಹೇಳಿದರೂ ಅದನ್ನು ನಾನು ಬೆಂಬಲಿಸುತ್ತೇನೆ ಎಂದರು.