ಸುಳ್ಯ, ನ. 02 (DaijiworldNews/TA): ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಸಂಭ್ರಮ ಎಂಬ ವಿನೂತನ ಸರಣಿ ಕಾರ್ಯಕ್ರಮ ಹಮ್ಮಿಕೊಂಡು ನಾಡಿನಲ್ಲಿ ಕನ್ನಡವನ್ನು ಪಸರಿಸುವ ಕೆಲಸವನ್ನು ಮಾಡುತ್ತಿರುವುದು ಉತ್ತಮ ಕೆಲಸ ಎಂದು ಡಾ.ಯು.ಪಿ. ಶಿವಾನಂದ ಹೇಳಿದರು.

ಅವರು ನ.2ರಂದು ರಂಗಮಯೂರಿ ಕಲಾಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕದ ವತಿಯಿಂದ ಸಂಘ ಸಂಸ್ಥೆಗಳ ಸಹಕಾರದೊಂದಿಗೆ 7 ದಿನಗಳ ಕಾಲ ನಡೆಯಲಿರುವ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಾಹಿತ್ಯ ಸಂಭ್ರಮ 2025ನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾವನಾ ಸುಗಮ ಸಂಗೀತದ ಅಧ್ಯಕ್ಷ ಕೆ.ಆರ್.ಗೋಪಾಲಕೃಷ್ಣ ಮಾತನಾಡಿ, ತಮ್ಮ ಮಕ್ಕಳಿಗೆ ಕನ್ನಡ ಭಾಷೆಯನ್ನು ಚೆನ್ನಾಗಿ ಕಲಿಸಿ ಎಂದು ಹೇಳಿದರು.
ಸಂಗೀತ ಶಿಕ್ಷಕಿ ಸುಮನಾ ರಾವ್ ಪುತ್ತೂರು ಭಾಗವಹಿಸಿದ್ದರು. ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಸಾಪ ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತ್ತಡ್ಕ, ಕಸಾಪ ಸುಳ್ಯ ಹೋಬಳಿ ಘಟಕದ ಅಧ್ಯಕ್ಷರಾದ ಚಂದ್ರಾವತಿ ಬಡ್ಡಡ್ಕ, ಕಸಾಪ ತಾಲೂಕು ಘಟಕದ ಗೌ.ಕಾರ್ಯದರ್ಶಿಗಳಾದ ತೇಜಸ್ವಿ ಕಡಪಳ ಮತ್ತು ಚಂದ್ರಮತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸುಳ್ಯ ತಾಲೂಕಿನ ಹೆಸರಾಂತ ಗಾಯಕರು ಮತ್ತು ನೆಹರೂ ಮೆಮೋರಿಯಲ್ ಕಾಲೇಜ್ ಸುಳ್ಯ ಇಲ್ಲಿಯ ತುಳಸಿ ಮತ್ತು ತಂಡ ಹಾಗೂ ಸುಳ್ಯದ ರಂಗಮಯೂರಿ ಕಲಾ ಶಾಲಾ ವಿದ್ಯಾರ್ಥಿಗಳಿಂದ ಗಾನಕಲರವ ನಡೆಯಿತು.