ಮೂಡಬಿದಿರೆ, ನ. 02 (DaijiworldNews/TA): ಉಡುಪಿ - ಕಾಸರಗೋಡು 440 ಕೆ.ವಿ. ವಿದ್ಯುತ್ ಲೈನ್ ಕಾಮಗಾರಿಯ ಸಂದರ್ಭದಲ್ಲಿ ರೈತರ ಕೃಷಿ ನಾಶ ಮಾಡಿದ್ದಲ್ಲದೆ ಪೊಲೀಸ್ ಬಲವನ್ನು ಬಳಸಿಕೊಂಡು ರೈತರ ಮೇಲೆ ದೌರ್ಜನ್ಯವೆಸಗಿದ ಸ್ಟೆರ್ ಲೈಟ್ ವಿದ್ಯುತ್ ಕಂಪೆನಿ ವಿರುದ್ಧ ಬೃಹತ್ ಸಂಖ್ಯೆಯಲ್ಲಿ ಸೇರಿದ ರೈತರು ಶನಿವಾರ ಕಂಪೆನಿ ವಿರುದ್ಧ ಮೂಡಬಿದ್ರೆಯಲ್ಲಿ ಪ್ರತಿಭಟನಾ ಜಾಥಾ, ಸಭೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಕ್ರೋಶಭರಿತ ರೈತರು ಅಶ್ವತ್ಥಪುರ ಸೀತಾರಾಮ ದೇವಸ್ಥಾನದ ಬಳಿ ಬೃಹತ್ ಸಂಖ್ಯೆಯಲ್ಲಿ ಜಮಾವಣೆಗೊಂಡು ಕಂಪೆನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಒಂಟಿಮಾರ್ ಪ್ರದೇಶದ ಬೆಳೆ ಹಾನಿಗೆ ಒಳಗಾದ ರೈತ ಭಾಸ್ಕರ ಶೆಟ್ಟಿ ಅವರ ಜಮೀನಿನಿವರೆಗೂ ಜಾಥಾ ನಡೆಸಿದರು. ಬಳಿಕ ಅವರ ನಿವಾಸದಲ್ಲಿ ಸಭೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಕೇಮಾರು ಸಾಂದೀಪನಿ ಮಠದ ಈಶ ವಿಠಲದಾಸ ಸ್ವಾಮೀಜಿ, ಅವಿಭಜಿತ ದ.ಕ - ಉಡುಪಿ ಜಿಲ್ಲೆಯಲ್ಲಿ ಆರಂಭವಾಗುವ ಜನವಿರೋಧಿ, ರೈತ ವಿರೋಧಿ ಕಂಪೆನಿಗಳ ವಿರುದ್ಧ ಹೋರಾಟಗಳು ಫ್ರಾಥಮಿಕ ಹಂತದಲ್ಲಿ ಆರಂಭವಾಗುತ್ತದೆ. ಹೋರಾಟಗಳನ್ನು ಹತ್ತಿಕ್ಕಲು ಕಂಪೆನಿ ಹೋರಾಟದ ಮುಂಚೂಣಿಯಲ್ಲಿರುವ ನಾಯಕರನ್ನು ಹಣ, ಭೂಮಿ ಇಂತಹಾ ಆಮಿಷಗಳನ್ನು ಒಡ್ಡಿ ಬದಿಗೆ ಸರಿಸುತ್ತದೆ ಎಂದು ಆರೋಪಿಸಿದರು.
ಬಳಿಕ ಕಟೀಲು ದುರ್ಗಾಪರಮೇಶ್ವರಿ ದೇವಳದ ಅನುವಂಶಿಕ ಅರ್ಚಕರಾದ ಅನಂತ ಅಸ್ರಣ್ಣ ಮಾತನಾಡಿದರು. ಜಾಥದ ಬಳಿಕ ಬೆಳೆಹಾನಿ ನಡೆದ ರೈತ ಭಾಸ್ಕರ ಶೆಟ್ಟಿ ಅವರ ನಿವಾಸದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡದ ರೈತ ಮುಖಂಡರಾದ ನಾರಾಯಣ ಸ್ವಾಮಿ, ಒಬ್ಬ ರೈತನ ಸಮಸ್ಯೆ ಎಲ್ಲ ರೈರಮತರ ಸಮಸ್ಯೆ. ಒಬ್ಬರ ಸಮಸ್ಯೆಗೆ ಎಲ್ಲರೂ ಒಗ್ಗೂಡಿ ಹೋರಾಡಬೇಕಿದೆ. ಸರಕಾರಗಳು ರೈತರ ಅನುಮತಿ ಇಲ್ಲದೆ ಆಕ್ರಮಿಸಿಕೊಂಡು ಬೆಳೆ ನಾಶ ಮಾಡಿಕೊಂಡು ತಮ್ಮ ಕಾರ್ಯಸಾಧನೆ ಮಾಡುತ್ತಿದೆ. ಕಂಪೆನಿಗೆ ರೈತರ ಜಮೀನಿಗೆ ಅನಧೀಕೃತ ದಾಳಿ ಮಾಡಿ ಬೆಳೆ ಹಾನಿ ಮಾಡಲು ಪರವಾನಿಗೆ ನೀಡಿದವರು ಯಾರು ಎಂದು ಪ್ರಶ್ನಿಸಿದರು. ಈ ಸಂದರ್ಭ ರೈತ ಸಂಘದ ರಾಜ್ಯ ಮುಖಂಡ ನಾರಾಯಣ ಸ್ವಾಮಿ, ಸುಚರಿತ ಶೆಟ್ಟಿ, ಕೃಷ್ಣ ಪ್ರಸಾದ್ ತಂತ್ರಿ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.