ಕಾಸರಗೋಡು, ನ. 02 (DaijiworldNews/TA): ಕೇರಳ ರಾಜ್ಯೋತ್ಸವ ದಿನವಾದ ಶನಿವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಗಡಿನಾಡಿನ ವಿವಿಧ ಕನ್ನಡ ಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಹಕ್ಕೊತ್ತಾಯ ನಡೆಯಿತು.

ಬಳಿಕ 18 ಬೇಡಿಕೆ ಗಳನ್ನು ಒಳಗೊಂಡ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು. ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿ ವರೆಗಿನ ಶಿಕ್ಷಣದಲ್ಲಿ ಮಲಯಾಳಂ ಕಡ್ಡಾಯಗೊಳಿಸಿರುವ ಮಸೂದೆಯಲ್ಲಿ ಗಡಿನಾಡ ಕನ್ನಡಿಗರಿಗೆ ಭಾಷಾ ಅಲ್ಪಸಂಖ್ಯಾತ ಪರಿಗಣನೆಯೊಂದಿಗೆ ರಿಯಾಯಿತಿ ನೀಡಬೇಕು.
ನಮ್ಮ ಭಾಷೆ ನಮ್ಮ ಹಕ್ಕು ಸೇರಿದಂತೆ ಹಲವು ಬೇಡಿಕೆಯೊಂದಿಗೆ ಧರಣಿ ನಡೆಯಿತು. ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ ಉದ್ಘಾಟಿಸಿದರು. ಕರ್ನಾಟಕ ಸಮಿತಿ ಅಧ್ಯಕ್ಷ, ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ ಅಧ್ಯಕ್ಷತೆ ವಹಿಸಿದರು. ಕ. ಸಾ. ಪ. ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿದರು.
ಟಿ. ಶಂಕರನಾರಾಯಣ ಭಟ್, ರವೀಶ ತಂತ್ರಿ ಕುಂಟಾರ್, ನ್ಯಾಯವಾದಿ ಶ್ರೀಕಾಂತ್ ಕಾಸರಗೋಡು, ಎಂ. ಸಂಜೀವ ಶೆಟ್ಟಿ , ವಿಶಾಲಾಕ್ಷ ಪುತ್ರಕಳ, ಶಿವರಾಮ ಕಾಸರಗೋಡು, ಉಮೇಶ ಸಾಲಿಯಾನ್, ಗಣೇಶ ಪ್ರಸಾದ ಪಾಣೂರು, ಬೇ. ಸಿ. ಗೋಪಾಲಕೃಷ್ಣ ಭಟ್, ಎನ್. ಕೆ. ಮೋಹನದಾಸ್, ಗುರುಪ್ರಸಾದ ಕೋಟೆಕಣಿ, ಸುಂದರ ಬಾರಡ್ಕ, ಸವಿತಾ ಟೀಚರ್, ಜಯನಾರಾಯಣ ತಾಯನ್ನೂರು ಮೊದಲಾದವರು ನೇತೃತ್ವ ನೀಡಿದರು. ವೀಜಿ ಕಾಸರಗೋಡು ನಿರೂಪಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕನ್ನಡಿಗರ ಬೇಡಿಕೆಯ ಮನವಿ ಸಲ್ಲಿಸಲಾಯಿತು.