ಮೂಡುಬಿದಿರೆ, ಅ. 21 (DaijiworldNews/AA): ಟ್ರ್ಯಾಕ್ಟರ್ ತೊಳೆಯುತ್ತಿದ್ದ ವೇಳೆ ವ್ಯಕ್ತಿಯೋರ್ವ ಆಕಸ್ಮಿಕವಾಗಿ ಟ್ರ್ಯಾಕ್ಟರ್ ಸಹಿತ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ನೆಲ್ಲಿಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಂಟ್ರಾಡಿ ಕೊಂಬೆಟ್ಟು ಎಂಬಲ್ಲಿ ಅ.21ರ ಬೆಳಗ್ಗೆ ಸಂಭವಿಸಿದೆ.

ಒಂಬೆಟ್ಟು ನಿವಾಸಿ ರಾಜೇಶ್ (38) ಮೃತ ವ್ಯಕ್ತಿ.
ರಾಜೇಶ್ ತಮ್ಮ ಮನೆಯ ಪಕ್ಕದಲ್ಲಿರುವ ಸಂಬಂಧಿಕರಿಗೆ ಸೇರಿದ ಟ್ರ್ಯಾಕ್ಟರ್ ಅನ್ನು ಬಾವಿಯ ಸಮೀಪ ನಿಲ್ಲಿಸಿ ತೊಳೆಯುತ್ತಿದ್ದರು. ಈ ಸಂದರ್ಭ ಟ್ರ್ಯಾಕ್ಟರ್ ಆಕಸ್ಮಿಕವಾಗಿ ಬಾವಿಯ ಕಡೆಗೆ ಚಲಿಸಲಾರಂಭಿಸಿದೆ. ಅದನ್ನು ತಡೆದು ನಿಲ್ಲಿಸಲು ಮುಂದಾದ ರಾಜೇಶ್ ಕೂಡಾ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಜೊತೆ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮೃತರು ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದಾರೆ.