ಬೆಳ್ತಂಗಡಿ, ಸೆ. 18 (DaijiworldNews/AK): ಧರ್ಮಸ್ಥಳ ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನನ್ನು ಇಂದು (ಸೆ.18) ಬೆಳ್ತಂಗಡಿ ಕೋರ್ಟ್ಗೆ ಪೊಲೀಸರು ಹಾಜರುಪಡಿಸಲಿದ್ದಾರೆ.

ನ್ಯಾಯಾಧೀಶರ ಮುಂದೆ ಚಿನ್ನಯ್ಯ ಮತ್ತಷ್ಟು ಹೇಳಿಕೆ ನೀಡಲಿದ್ದಾನೆ. ಈ ಹಿಂದೆ ನೀಡಿದ್ದ ಹೇಳಿಕೆಗೆ ಹೆಚ್ಚುವರಿ ಹೇಳಿಕೆ ಸೇರ್ಪಡೆ ಪ್ರಕ್ರಿಯೆ ನಡೆಯಲಿದೆ. ಸದ್ಯ ಶಿವಮೊಗ್ಗ ಜೈಲಿನಲ್ಲಿರುವ ಚಿನ್ನಯ್ಯನನ್ನು ಸೆ.6ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಶಿವಮೊಗ್ಗ ಜೈಲಿನಿಂದ ಚಿನ್ನಯ್ಯನನ್ನು ಎಸ್ಐಟಿ ಅಧಿಕಾರಿಗಳು ಬೆಳಗ್ಗೆ 11:30ಕ್ಕೆ ಬೆಳ್ತಂಗಡಿ ಕೋರ್ಟ್ಗೆ ಹಾಜರುಪಡಿಸುವ ಸಾಧ್ಯತೆ ಇದೆ. ಧರ್ಮಸ್ಥಳದ ಬುರುಡೆ ಕೇಸ್ನಲ್ಲಿ ಸೌಜನ್ಯ ಮಾವ ವಿಠಲಗೌಡ ಬಂಗ್ಲೆಗುಡ್ಡದಲ್ಲಿ ರಾಶಿರಾಶಿ ಕಳೇಬರ ಸಿಗುತ್ತವೆ ಎಂಬ ವೀಡಿಯೋ ಹೇಳಿಕೆ ಬೆನ್ನಲ್ಲೇ ಎಸ್ಐಟಿ ತನಿಖೆಗೆ ಟ್ವಿಸ್ಟ್ ಸಿಕ್ಕಿದೆ.
ನೇತ್ರಾವತಿ ನದಿ ದಡದ ಬಂಗ್ಲೆಗುಡ್ಡಕ್ಕೆ ಎಸ್ಐಟಿ ತನಿಖಾಧಿಕಾರಿ ಜಿತೇಂದ್ರ ದಯಾಮ ನೇತೃತ್ವದಲ್ಲಿ ಸುಮಾರು 7 ಗಂಟೆಗಳ ಕಾಲ ಮಹಜರು ನಡೆಯಿತು. ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಸೋಕೋ ಟೀಮ್, ಕಂದಾಯ ಇಲಾಖೆ, ಪಂಚಾಯತ್ ಸಿಬ್ಬಂದಿ ಮಹಜರಿನಲ್ಲಿ ಭಾಗಿಯಾಗಿದ್ದರು. ಬಂಗ್ಲೆಗುಡ್ಡದಲ್ಲಿ 5 ಕಡೆ ಮಹಜರು ನಡೆದಿದೆ. ಈ ವೇಳೆ 5 ತಲೆಬುರಡೆ, 113 ಮೂಳೆಗಳು ಸಿಕ್ಕಿವೆ ಎಂದು ವರದಿಯಾಗಿದೆ.