ಬಂಟ್ವಾಳ, ಸೆ. 17 (DaijiworldNews/AK): ತೆನೆ ಹಬ್ಬ ಆಚರಣೆಯ ಹಿನ್ನೆಲೆಯಲ್ಲಿ ಕನ್ಯಾ ಸಂಕ್ರಮಣದ ಮರುದಿನ ಸಿಂಗುಡೆಯ ದಿನ ಪೂರ್ವ ಸಂಪ್ರದಾಯದಂತೆ ಭೂ ಕೈಲಾಸ ಕ್ಷೇತ್ರ ಕಾರಿಂಜ ಕ್ಷೇತ್ರದಿಂದ ಶ್ರೀ ದೇವರು ವಿವಿಧ ಕಟ್ಟೆಗಳಿಗೆ ಆಗಮಿಸಿ ಪೂಜೆಯನ್ನು ಪಡೆದು ಕೊನೆಗೆ ಸರಪಾಡಿ ಗ್ರಾಮದ ಹಲ್ಲಂಗಾರು ಕಟ್ಟೆಯಲ್ಲಿ ದೇವರ ದರ್ಶನ ಬಲಿ ಸಹಿತ ವಿಶೇಷ ಪೂಜೆ ನಡೆದು ಭತ್ತದ ತೆನೆಯನ್ನು ಕೊಂಡೊಯ್ಯಲಾಯಿತು.







ಪ್ರತಿವರ್ಷವೂ ತೆನೆ ಹಬ್ಬದ ಸಂದರ್ಭದಲ್ಲಿ ಕಾರಿಂಜ ಕ್ಷೇತ್ರದಿಂದ ದೇವರು ಸುಮಾರು ೯ ಕಿ.ಮೀ. ದೂರಕ್ಕೆ ಆಗಮಿಸಿ ಒಟ್ಟು 7 ಕಟ್ಟೆಗಳಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಸೂರ್ಯೋದಯಕ್ಕೆ ಮುನ್ನಾ ಕಾರಿಂಜ ಕ್ಷೇತ್ರದಿಂದ ವಾದ್ಯ ವೃಂದ ಸಹಿತ ತಂತ್ರಿಗಳು, ಅರ್ಚಕರು, ಗ್ರಾಮಣಿಗಳು, ಮುಖ್ಯಸ್ಥರು ಕಾಲ್ನಡಿಗೆಯಲ್ಲೇ ಸಾಗಲಿದ್ದಾರೆ.
ಶೇಡಿಮೆ ಕಟ್ಟೆ, ದಂಡ್ಯೊಟ್ಟು ಕಟ್ಟೆ, ದೇವಶ್ಯ ಕಟ್ಟೆ, ಸೂಳ್ದುಕ್ಕು ಕಟ್ಟೆ, ಭಂಡಾರಿಕಟ್ಟೆ, ಸಮಗಾರಕಟ್ಟೆಯ ಬಳಿಕ ಕೊನೆಗೆ ಈಶ್ವರ ಸನ್ನಿಧಿಯ ಹಲ್ಲಂಗಾರು ಆಗಮಿಸಿ ಇಲ್ಲಿಂದ ತೆನೆಗಳನ್ನು ಕೊಂಡೊಯ್ಯಲಾಗುತ್ತದೆ. ಜೈನ ಮನೆತನದ ಲೀಲಾವತಿ ಅಮ್ಮನವರಿಗೆ ಸೇರಿದ ಕಂಬಳದ ಗದ್ದೆಯಲ್ಲಿ ಬಂಗಾರದ ತೆನೆ ಬೆಳೆದಿದೆ ಎಂಬ ನಂಬಿಕೆ ಇದ್ದು, ಇಲ್ಲಿಂದ ತೆನೆಗಳನ್ನು ಪಡೆದು ಕಾರಿಂಜದಲ್ಲಿ ಸಂಪ್ರದಾಯಗಳು ನೆರವೇರಿದ ಬಳಿಕ ಭಕ್ತರಿಗೆ ಹಂಚಲಾಗುತ್ತದೆ.
ಜೊತೆಗೆ ಪ್ರತಿ ಕಟ್ಟೆಗಳು ಸಹಿತ ಹಲ್ಲಂಗಾರು ಕಟ್ಟೆಯಲ್ಲೂ ಹೆಚ್ಚಿನ ಭಕ್ತರು ಸೇರಿ ತೆನೆಗಳನ್ನು ಪಡೆದು ಮನೆ ತುಂಬಿಸಿಕೊಂಡು ಹೊಸ ಅಕ್ಕಿ ಊಟ ಮಾಡುವ ಕಾರ್ಯ ನಡೆಸಿದರು.