ಕಾಸರಗೋಡು,ಸೆ. 17 (DaijiworldNews/AK): 16 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೊಲೀಸರು ಸಹಾಯಕ ಶಿಕ್ಷಣಾಧಿಕಾರಿ ಮತ್ತು ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಅಧಿಕಾರಿ ಸೇರಿದಂತೆ ಒಂಬತ್ತು ಜನರನ್ನು ಬಂಧಿಸಿದ್ದಾರೆ.

ಕಾಸರಗೋಡು, ಕಣ್ಣೂರು, ಕೋಯಿಕ್ಕೋಡ್ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ 16 ಆರೋಪಿಗಳ ವಿರುದ್ಧ ಒಟ್ಟು 16 ಪ್ರಕರಣಗಳು ದಾಖಲಾಗಿವೆ ಎಂದು ಚಂದೇರಾ ಪೊಲೀಸರು ತಿಳಿಸಿದ್ದಾರೆ.
ಬಂಧಿತರಲ್ಲಿ ಬೇಕಲ ಸಹಾಯಕ ಶಿಕ್ಷಣಾಧಿಕಾರಿ (ಎಇಒ) ವಿ.ಕೆ.ಝೈನುದ್ದೀನ್ (52); ಆರ್ಪಿಎಫ್ ಅಧಿಕಾರಿ ಚಿತ್ರರಾಜ್ ಎರಾವಿಲ್ (48); ತ್ರಿಕರಿಪುರದ ವಳವಕ್ಕಾಡ್ ನಿವಾಸಿ ಅಬ್ದುಲ್ ರಹಿಮಾನ್ ಹಾಜಿ (55); ಪಿಲಿಕೋಡು ಪಂಚಾಯತ್ ನ ವೆಳ್ಳಕ್ಕಲ್ ನ ಸುಕೇಶ್ (30); ಚಂದೇರದ ಅಫ್ಜಲ್ (23); ಚೀಮೇನಿಯ ಶಿಜಿತ್ (36); ತ್ರಿಕರಿಪುರ ಸಮೀಪದ ಕೋವಲ್ ನ ರಯೀಸ್ (30); ಕಾಞಂಗಾಡ್ ಪಡನ್ನಕ್ಕಾಡ್ ನ ರಂಜನ್ (64); ಮತ್ತು ಚೀಮೇನಿಯ ನಾರಾಯಣನ್ (60). ಇದೇ ವೇಳೆ ಸಾಮಾನ್ಯ ಶಿಕ್ಷಣ ಇಲಾಖೆ ಝೈನುದ್ದೀನ್ ಅವರನ್ನು ಅಮಾನತು ಮಾಡಿದೆ.
ಯೂತ್ ಲೀಗ್ ತ್ರಿಕರಿಪುರ ಪಂಚಾಯತ್ ಸಮಿತಿ ಪ್ರಧಾನ ಕಾರ್ಯದರ್ಶಿ ಸಿರಾಜ್ ವಡಕ್ಕುಂಪಡ್ (46) ಸೇರಿದಂತೆ ಇತರ ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಟ್ಟು 16 ಪ್ರಕರಣಗಳಲ್ಲಿ 10 ಪ್ರಕರಣಗಳು ಚಂದೇರಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಉಳಿದ ಆರು ಪ್ರಕರಣಗಳು ಕಣ್ಣೂರಿನ ಪಯ್ಯನ್ನೂರು ಠಾಣೆ, ಕೋಝಿಕ್ಕೋಡ್ನ ಕಸಬಾ ಠಾಣೆ ಮತ್ತು ಎರ್ನಾಕುಲಂನ ಎಲಮಕ್ಕರ ಠಾಣೆಯಲ್ಲಿ ದಾಖಲಾಗಿವೆ ಎಂದು ಕಾಸರಗೋಡು ಎಸ್ಪಿ ವಿವಿ ವಿಜಯ ರೆಡ್ಡಿ ತಿಳಿಸಿದ್ದಾರೆ.
ಬಾಲಕನ ತಾಯಿ ಅಪರಿಚಿತ ವ್ಯಕ್ತಿಗಳು ಫೋನ್ ಮೂಲಕ ಆತನನ್ನು ಸಂಪರ್ಕಿಸಿ ಅವರ ಮನೆಗೆ ಭೇಟಿ ನೀಡುತ್ತಿರುವುದನ್ನು ಗಮನಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಪೊಲೀಸರನ್ನು ಸಂಪರ್ಕಿಸಿದಾಗ, ಈ ವಿಷಯವನ್ನು ಚೈಲ್ಡ್ಲೈನ್ಗೆ ಉಲ್ಲೇಖಿಸಲಾಯಿತು, ಅಲ್ಲಿ ಬಾಲಕನಿಗೆ ಕೌನ್ಸೆಲಿಂಗ್ ನಡೆಸಿದಾಗ ದೌರ್ಜನ್ಯದ ವಿವರಗಳನ್ನು ಬಹಿರಂಗಪಡಿಸಿದನು. ನಂತರ ಪೊಲೀಸರು ಪ್ರಕರಣಗಳನ್ನು ದಾಖಲಿಸಿದರು.
ಬಿಎನ್ಎಸ್ನ ಸೆಕ್ಷನ್ 377 ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 3, 4, 5, 6, 7 ಮತ್ತು 8 ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಸಹಾಯಕ ಶಿಕ್ಷಣಾಧಿಕಾರಿ (ಎಇಒ ) ಝೈನುದ್ದೀನ್ ಅಮಾನತು
ಪ್ರಕರಣದಲ್ಲಿ ಬಂಧಿತರಾಗಿರುವ ಎಇಒ ಝೈನುದ್ದೀನ್ ಅವರನ್ನು ಅಮಾನತುಗೊಳಿಸಿ ಶಿಕ್ಷಣ ಸಚಿವ ವಿ. ಶಿವನ್ಕುಟ್ಟಿ ಆದೇಶಿಸಿದ್ದಾರೆ. ಶಾಲಾ ವಿದ್ಯಾರ್ಥಿಯಾಗಿದ್ದ ಈ ಬಾಲಕನಿಗೆ ಡೇಟಿಂಗ್ ಆ್ಯಪ್ ಮೂಲಕ ಹಲವಾರು ಪುರುಷರ ಪರಿಚಯವಾಗಿದ್ದು, ಸರ್ಕಾರಿ ಅಧಿಕಾರಿಗಳು ಮತ್ತು ರಾಜಕೀಯ ಕಾರ್ಯಕರ್ತರು ಸೇರಿದಂತೆ ವ್ಯಕ್ತಿಗಳಿಂದ ಕಿರುಕುಳ ನೀಡಲಾಗಿದೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಈ ದೌರ್ಜನ್ಯ ನಡೆಯುತ್ತಿತ್ತು ಎಂದು ವರದಿಗಳು ಸೂಚಿಸುತ್ತವೆ.
ಇಲ್ಲಿಯವರೆಗೆ ದಾಖಲಾಗಿರುವ 14 ಸಂಬಂಧಿತ ಪ್ರಕರಣಗಳಲ್ಲಿ ಎಂಟು ಪ್ರಕರಣಗಳು ಕಾಸರಗೋಡು ಜಿಲ್ಲೆಯಲ್ಲಿ ಕೇಂದ್ರೀಕೃತವಾಗಿವೆ. ನಾಲ್ವರು ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವು ತನಿಖೆ ನಡೆಸುತ್ತಿದೆ.