ಉಡುಪಿ, ಸೆ. 16 (DaijiworldNews/AA): ಶ್ರೀ ಕೃಷ್ಣ ಮಠದ ರಥಬೀದಿಯಲ್ಲಿ ನಡೆದ ವಿಟ್ಲಪಿಂಡಿ ಸಂಭ್ರಮಾಚರಣೆಗಳು ಈ ವರ್ಷ ಭಾರೀ ವಿಶೇಷವಾಗಿತ್ತು. ಕ್ರಿಕೆಟ್ ಅಭಿಮಾನಿಗಳಿಗೆ ಈ ಬಾರಿ ಅಚ್ಚರಿ ಕಾದಿತ್ತು. ಸಾಂಪ್ರದಾಯಿಕ ಮೆರವಣಿಗೆ ಮತ್ತು ಸಾಂಸ್ಕೃತಿಕ ಪ್ರದರ್ಶನಗಳ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ವಿಜಯೋತ್ಸವ ಪ್ರಮುಖ ಆಕರ್ಷಣೆಯಾಗಿತ್ತು. ಇದರಲ್ಲಿ ವಿರಾಟ್ ಕೊಹ್ಲಿ ಹೋಲಿಕೆ ಇರುವ ಯುವಕ ಎಲ್ಲರ ಗಮನ ಸೆಳೆದರು.









ಆರ್ಸಿಬಿ ತಾರೆಯರಾದ ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ರೊಮಾರಿಯೋ ಶೆಫರ್ಡ್ ಮತ್ತು ಡ್ಯಾನಿಶ್ ಸೇಠ್ ಅವರಂತೆ ವೇಷ ಧರಿಸಿದ್ದ ಕಲಾವಿದರು, ಟ್ರೋಫಿ ಹಿಡಿದು ಭಕ್ತರಿಗೆ ಕೈ ಬೀಸುತ್ತಾ ಆರ್ಸಿಬಿ ತಂಡದ ಐಪಿಎಲ್ ವಿಜಯದ ಉತ್ಸಾಹವನ್ನು ಮರುಸೃಷ್ಟಿಸಿದರು. ಈ ವಿನೂತನ ಪ್ರದರ್ಶನವು ಕೃಷ್ಣ ಜನ್ಮಾಷ್ಟಮಿಯ ಆಧ್ಯಾತ್ಮಿಕ ವಾತಾವರಣಕ್ಕೆ ಹೊಸ ಮತ್ತು ಕ್ರೀಡಾ ಸ್ಪರ್ಶವನ್ನು ನೀಡಿತು.
ವಿರಾಟ್ ಕೊಹ್ಲಿಯ ರೂಪವನ್ನು ಹೋಲುವ ಹರಿಯಾಣದ ಲಕ್ಷಯ್ ಎಂಬ ಯುವಕ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು. ಲಕ್ಷಯ್ ಅವರ ಆಗಮನದಿಂದ ಅಭಿಮಾನಿಗಳು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಲು ಮತ್ತು ಅವರಿಗೆ ಜೈಕಾರ ಕೂಗಲು ಮುಗಿಬಿದ್ದರು.
ಈ ವೇಳೆ ಮಾತನಾಡಿದ ಲಕ್ಷಯ್ ಅವರು, "ನಾನು ದಕ್ಷಿಣ ಭಾರತಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಉಡುಪಿಯ ಜನರಿಂದ ನನಗೆ ಅಪಾರ ಪ್ರೀತಿ ದೊರಕಿದೆ. ಇಲ್ಲಿ ನಾನು ಅನುಭವಿಸಿದ ಉತ್ಸಾಹ ಮತ್ತು ಮನ್ನಣೆ ನನಗೆ ಅತ್ಯಂತ ಸಂತೋಷ ತಂದಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಆಯೋಜಿಸಲಾದ ಸಾಂಸ್ಕೃತಿಕ ಸಂಭ್ರಮವನ್ನು ನೋಡುವುದು ಅಪರೂಪ. ನಾನು ಆರ್ಸಿಬಿಯ ಕಟ್ಟಾ ಅಭಿಮಾನಿಯಾಗಿರುವುದರಿಂದ, ಇದು ನನಗೆ ವಿಶೇಷ ಕ್ಷಣವಾಗಿತ್ತು. ಅವಕಾಶ ಸಿಕ್ಕರೆ ನಾನು ಮತ್ತೆ ಉಡುಪಿಗೆ ಬರಲು ಇಷ್ಟಪಡುತ್ತೇನೆ. ಆಯೋಜಕರು ಅತ್ಯುತ್ತಮ ಕೆಲಸ ಮಾಡಿದ್ದಾರೆ" ಎಂದು ಹೇಳಿದರು.
ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಮಾತನಾಡಿ, "ಪ್ರತಿ ವರ್ಷ ಈ ತಂಡ ಕೃಷ್ಣ ಜನ್ಮಾಷ್ಟಮಿಗೆ ಹೊಸ ಪರಿಕಲ್ಪನೆಯನ್ನು ಪರಿಚಯಿಸುತ್ತದೆ. ಈ ಬಾರಿ ಅವರು ವಿರಾಟ್ ಕೊಹ್ಲಿಯ ಹೋಲಿಕೆ ಇರುವ ಯುವಕನನ್ನು ದೆಹಲಿಯಿಂದ ಕರೆತಂದಿದ್ದರು. ಅವರ ಈ ವಿನೂತನ ಕಲ್ಪನೆಗಳು ಜನರಿಗೆ ಮನರಂಜನೆ ನೀಡುವುದಲ್ಲದೆ, ವಿಶಿಷ್ಟ ರೀತಿಯಲ್ಲಿ ಜಾಗೃತಿಯನ್ನೂ ಮೂಡಿಸುತ್ತವೆ" ಎಂದರು.