ಮಂಗಳೂರು, ಸೆ. 15 (DaijiworldNews/AA): ಸೌದಿ ಅರೇಬಿಯಾದಲ್ಲಿ ಭಾನುವಾರ ಸಂಜೆ ನಡೆದ ಭೀಕರ ಬಸ್ ಅಪಘಾತದಲ್ಲಿ ಉಳ್ಳಾಲದ ಮಿಲ್ಲತ್ ನಗರದ ಯುವಕನೋರ್ವ ಸಾವನ್ನಪ್ಪಿದ್ದಾರೆ.

ಮೃತರನ್ನು ಉಳ್ಳಾಲದ ಮಿಲ್ಲತ್ ನಗರದ ನಿವಾಸಿ ಮೊಹಮ್ಮದ್ ಅವರ ಪುತ್ರ ಅಬ್ದುಲ್ ರಝಿಕ್ (27) ಎಂದು ಗುರುತಿಸಲಾಗಿದೆ. ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ ರಝಿಕ್, ಭಾನುವಾರ ಸಂಜೆ ನೈಟ್ ಶಿಫ್ಟ್ಗೆ ತೆರಳುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ಬಸ್ ಇನ್ನೊಂದು ಬಸ್ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೊಹಮ್ಮದ್ ಅವರ ಕಿರಿಯ ಪುತ್ರನಾದ ರಝಿಕ್, ಸಿವಿಲ್ ಇಂಜಿನಿಯರಿಂಗ್ ಕೋರ್ಸ್ ಮುಗಿಸಿ ವಿದೇಶಕ್ಕೆ ತೆರಳಿದ್ದರು. ಅವರು ಜುಬೈಲ್ನಲ್ಲಿರುವ ಪಾಲಿಟೆಕ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ರಝಿಕ್ ಈ ವರ್ಷ ಜುಲೈ 11ರಂದು ತಮ್ಮ ತವರೂರಿಗೆ ಬಂದು ಒಂದು ತಿಂಗಳ ರಜೆ ಮುಗಿಸಿ ಆಗಸ್ಟ್ 15ರಂದು ಸೌದಿ ಅರೇಬಿಯಾಕ್ಕೆ ಹಿಂದಿರುಗಿದ್ದರು.
ರಝಿಕ್ ಈ ಹಿಂದೆ ತಮ್ಮ ಸಹೋದರ ಮತ್ತು ಸಹೋದರಿಯನ್ನು ಅನಾರೋಗ್ಯದಿಂದ ಕಳೆದುಕೊಂಡಿದ್ದರು. ರಝಿಕ್ ತಮ್ಮ ಪೋಷಕರು, ಮೂವರು ಸಹೋದರಿಯರು ಮತ್ತು ಒಬ್ಬ ಸಹೋದರನನ್ನು ಅಗಲಿದ್ದಾರೆ.