ಮಂಗಳೂರು, ಸೆ. 02 (DaijiworldNews/AK): ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, ಮಹಿಳಾ ಪ್ರಯಾಣಿಕರೊಬ್ಬರ ಚೆಕ್-ಇನ್ ಲಗೇಜ್ನಿಂದ ಚಿನ್ನಾಭರಣಗಳನ್ನು ಕದ್ದ ಆರೋಪದ ಮೇಲೆ ಏರ್ ಇಂಡಿಯಾ SATS ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಬ್ಯಾಗೇಜ್ ನಿರ್ವಹಣಾ ಸಿಬ್ಬಂದಿಯನ್ನು ಬಂಧಿಸಲಾಗಿದೆ.

ಕಳವು ಮಾಲನ್ನು ಖರೀದಿಸಿದ ಆರೋಪ ಹೊತ್ತಿರುವ ಐದನೇ ವ್ಯಕ್ತಿಯನ್ನು ಸಹ ವಶಕ್ಕೆ ಪಡೆಯಲಾಗಿದೆ. ಕಾಣೆಯಾದ ಚಿನ್ನದ ಗಣನೀಯ ಭಾಗವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಆಗಸ್ಟ್ 30 ರಂದು ಬೆಳಿಗ್ಗೆ ಬೆಂಗಳೂರಿನಿಂದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಮಂಗಳೂರಿಗೆ ಬಂದಿಳಿದ ಮಹಿಳಾ ಪ್ರಯಾಣಿಕರೊಬ್ಬರು, ಬ್ಯಾಗೆಜ್ ಬೇಲ್ಟ್ ನಿಂದ ತಮ್ಮ ಲಗೇಜ್ ಅನ್ನು ಹೊರತೆಗೆದಾಗ, 4.5 ಲಕ್ಷ ರೂ. ಮೌಲ್ಯದ 56 ಗ್ರಾಂ ಚಿನ್ನಾಭರಣ ಕಾಣೆಯಾಗಿರುವುದು ಬೆಳಕಿಗೆ ಬಂದಿತು.
ಚಿನ್ನಾಭರಣ ಕಳೆದಕೊಂಡ ಪ್ರಯಾಣಿ ತಕ್ಷಣ ಬಜ್ಪೆ ಪೊಲೀಸ್ ಠಾಣೆಗೆ ಕಳ್ಳತನದ ಬಗ್ಗೆ ದೂರು ನೀಡಿದ್ದಾರೆ. ಆಕೆಯ ದೂರಿನ ಆಧಾರದ ಮೇಲೆ, ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 303(2) ಅಡಿಯಲ್ಲಿ ಅಪರಾಧ ಸಂಖ್ಯೆ 157/2025 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತರು ಬಿಡುಗಡೆ ಮಾಡಿದ ಅಧಿಕೃತ ಪತ್ರಿಕಾ ಪ್ರಕಟಣೆಯ ಪ್ರಕಾರ, ಪೊಲೀಸರು ನಾಲ್ವರು ಶಂಕಿತರನ್ನು ಬಂಧಿಸಿದ್ದು, ಎಲ್ಲರೂ ಏರ್ ಇಂಡಿಯಾ SATS ನಲ್ಲಿ ಲೋಡರ್ಗಳು ಮತ್ತು ಅನ್ಲೋಡರ್ಗಳಾಗಿ ಕೆಲಸ ಮಾಡುತ್ತಿದ್ದರು.
ಆರೋಪಿಗಳನ್ನು ಮಂಗಳೂರು ತಾಲೂಕು ಕಂದಾವರದ ನಿವಾಸಿ ನಿತಿನ್, ಮೂಡುಪೆರಾರದ ನಿವಾಸಿ ಸದಾನಂದ ಮತ್ತು ಬಜಪೆ ನಿವಾಸಿ ರಾಜೇಶ್ ಹಾಗೂ ಪ್ರವೀಣ್ ಫೆರ್ನಾಂಡಿಸ್ ಎಂದು ಗುರುತಿಸಲಾಗಿದೆ.
ವಿಚಾರಣೆಯ ಸಮಯದಲ್ಲಿ, ನಾಲ್ವರೂ ಪ್ರಯಾಣಿಕರ ಸಾಮಾನುಗಳನ್ನು ನಿರ್ವಹಿಸುವಾಗ ಚಿನ್ನವನ್ನು ಕದ್ದಿದ್ದಾಗಿ ಒಪ್ಪಿಕೊಂಡಿದ್ದಾರೆ ಕದ್ದ ಆಭರಣಗಳನ್ನು ಮೂಡುಪೆರಾರ್ನ ರವಿರಾಜ್ ಎಂಬ ವ್ಯಕ್ತಿಗೆ ಮಾರಾಟ ಮಾಡಿದ್ದಾಗಿ ಒಪ್ಪಿಕೊಂಡಿದ್ದರೆ.
ಕದ್ದ ಸೊತ್ತನ್ನು ಪಡೆದಿದ್ದಕ್ಕಾಗಿ ರವಿರಾಜ್ನನ್ನು ನಂತರ ಬಂಧಿಸಲಾಯಿತು ಮತ್ತು ಬಿಎನ್ಎಸ್ನ ಸೆಕ್ಷನ್ 317(2) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕದ್ದ ಆಭರಣಗಳಲ್ಲಿ ಸುಮಾರು 50 ಗ್ರಾಂಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇದರ ಮೌಲ್ಯ 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಈ ವರ್ಷದ ಆರಂಭದಲ್ಲಿ ಇದೇ ರೀತಿಯ ಪ್ರಕರಣದಲ್ಲಿ ಇದೇ ಗುಂಪು ಭಾಗಿಯಾಗಿತ್ತು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಬಹಿರಂಗಪಡಿಸಲಾಗಿದೆ. ಜನವರಿ 2025 ರಲ್ಲಿ, ಅವರು ಮನೋಹರ್ ಶೆಟ್ಟಿ ಎಂಬ ಪ್ರಯಾಣಿಕನ ಲಗೇಜ್ನಿಂದ 2 ಲಕ್ಷ ರೂ. ನಗದನ್ನು ಕದ್ದಿದ್ದಾರೆ ಎಂದು ವರದಿಯಾಗಿದೆ.
ಬಜ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 27/2025 ರ ಅಡಿಯಲ್ಲಿ ದಾಖಲಾಗಿದ್ದ ಆ ಪ್ರಕರಣವು ಈಗಾಗಲೇ ತನಿಖೆಯಲ್ಲಿದ್ದಾಗ ಈ ಹೊಸ ಕಳ್ಳತನ ಬೆಳಕಿಗೆ ಬಂದಿತು. ಎಲ್ಲಾ ಐವರು ಆರೋಪಿಗಳು ಸುಮಾರು ಒಂಬತ್ತು ವರ್ಷಗಳಿಂದ ಏರ್ ಇಂಡಿಯಾ SATS ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಅವರನ್ನು ಈಗ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆ ಮುಂದುವರೆದಿದ್ದು ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಪ್ರಾಥಮಿಕ ಸಂಶೋಧನೆಗಳು ಆರೋಪಿಗಳು ಚಿನ್ನ ಮತ್ತು ನಗದು ಮುಂತಾದ ಹೆಚ್ಚಿನ ಮೌಲ್ಯದ ವಸ್ತುಗಳನ್ನು ಹೊಂದಿರುವ ಲಗೇಜ್ಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡಿದ್ದಾರೆ ಎಂದು ಆಯುಕ್ತರು ಮಾಹಿತಿ ನೀಡಿದರು. ಬ್ಯಾಗ್ ಲಾಕ್ ನ ಸುಲಭ ಪಾಸ್ ವಾರ್ಡ್ ಸಂಖ್ಯೆಗಳಿದ್ದಲ್ಲಿ ಪ್ರಯತ್ನಿಸಿ ಕಳವು ಮಾಡುತ್ತಿರುವುದು ಕಂಡು ಬರುತ್ತದೆ. ಪ್ರಯಾಣಿಕರು ಈ ರೀತಿ ನಿರ್ಲಕ್ಷ್ಯತೋರದೇ, ಜಾಗೃತೆಯಿಂದ ಇರಬೇಕಾಗಿ ಮನವಿ ಮಾಡಿದ್ದಾರೆ.
"ಪ್ರಯಾಣಿಕರು ತಮ್ಮ ಚೆಕ್ ಮಾಡಿದ ಬ್ಯಾಗ್ಗಳಲ್ಲಿ ಚಿನ್ನ, ನಗದು ಅಥವಾ ಇತರ ದುಬಾರಿ ವಸ್ತುಗಳನ್ನು ಇಡುವುದನ್ನು ತಪ್ಪಿಸುವಂತೆ ನಾವು ವಿನಂತಿಸುತ್ತೇವೆ. ಈ ಪ್ರಕರಣವು ಪ್ರಯಾಣಿಕರಿಗೆ ಮಾತ್ರವಲ್ಲದೆ ವಿಮಾನಯಾನ ಭದ್ರತೆಗೂ ಎಚ್ಚರಿಕೆಯ ಗಂಟೆಯಾಗಿದೆ" ಎಂದು ಮಂಗಳೂರು ನಗರ ಪೊಲೀಸರ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಪ್ರಯಾಣಿಕರು ತಮ್ಮ ವಸ್ತುಗಳನ್ನು ಬಲವಾದ ಬೀಗಗಳಿಂದ ಭದ್ರಪಡಿಸಿಕೊಳ್ಳಬೇಕು ಮತ್ತು ಕಳ್ಳತನಕ್ಕೆ ಗುರಿಯಾಗುವ ಸಾಧ್ಯತೆ ಇರುವ ನಿರ್ಲಕ್ಷ್ಯವನ್ನು ತಪ್ಪಿಸಬೇಕು ಎಂದು ಪೊಲೀಸ್ ಆಯುಕ್ತರು ಸಲಹೆ ನೀಡಿದರು.