ಬಂಟ್ವಾಳ,ಆ. 30 (DaijiworldNews/AK):ಶಿಕ್ಷಣವೆಂದರೆ ವ್ಯಕ್ತಿಯಲ್ಲಿರುವ ದೈವಿ ಶಕ್ತಿಯ ಅನಾವರಣ. ಅದನ್ನು ಹೊರತೆಗೆಯುವ ಕೆಲಸ ಪೋಷಕರು ಶಿಕ್ಷಕರು ವಿದ್ಯಾಭಿಮಾನಿಗಳಿಂದಾಗಬೇಕು ಎಂದು ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು.

ಅವರು ಬಂಟ್ವಾಳ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೊಂಡಾಲ ಇಲ್ಲಿ MRPL ಸಂಸ್ಥೆಯ CSR ಅನುದಾನದಿಂದ ಮತ್ತು ಶಾಲಾಭಿವೃದ್ಧಿ ಸಮಿತಿ, ವಿವೇಕಾನಂದ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಇತರ ಸಂಘ ಸಂಸ್ಥೆ ದಾನಿಗಳ ಅನುದಾನದ ನೆರವಿನಿಂದ ನೂತನವಾಗಿ ನಿರ್ಮಿಸಿದ ತರಗತಿ ಕೊಠಡಿಗಳ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಒಟ್ಟು ಮೂರು ತರಗತಿ ಕೊಠಡಿಗಳು ನಿರ್ಮಾಣವಾಗಿದ್ದು ಬಂಟ್ವಾಳ ಕ್ಷೇತ್ರ ಶಾಸಕ ರಾಜೇಶ್ ನಾಯ್ಕ್ ಕೊಠಡಿಯ ಉದ್ಘಾಟಿಸಿ ಶಾಲೆಗೆ ಹಸ್ತಾಂತರಿಸಿದರು. ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನಾಮ ಫಲಕಗಳ ಅನಾವರಣ ಮಾಡಿ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಮೂರು ನಾಲ್ಕು ಗ್ರಾಮ ಒಟ್ಟು ಸೇರಿಸಿ ಒಂದು ಮಾದರಿ ಶಾಲೆ ನಿರ್ಮಾಣವಾಗುವ ಅಗತ್ಯತೆ ಇದ್ದು ಈ ಮೂಲಕ ಉತ್ತಮ ಶಿಕ್ಷಣ ನೀಡಲು ಸಾಧ್ಯ ಈ ಬಗ್ಗೆ ಕರ್ನಾಟಕ ರಾಜ್ಯ ಶಿಕ್ಷಣ ಮಂತ್ರಿಗೂ ಮನವರಿಕೆ ಮಾಡಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ವಹಿಸಿದ್ದರು. ಈ ಸಂದರ್ಭದಲ್ಲಿ 1979ರಲ್ಲಿ ಬೊಂಡಾಲ ಸರಕಾರಿ ಶಾಲೆ ಸ್ಥಾಪನೆಗೆ ಶ್ರಮಿಸಿದ ಮಹನೀಯರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಂಟ್ವಾಳ ಪುರಸಭೆ ಅಧ್ಯಕ್ಷ ವಾಸು ಪೂಜಾರಿ, ಬಂಟ್ವಾಳ ಸಮೂಹ ಸಂಪನ್ಮೂಲ ಕೇಂದ್ರ ಸಮನ್ವಯ ಅಧಿಕಾರಿ ವಿದ್ಯಾಕುಮಾರಿ, ಬಂಟ್ವಾಳ ನಗರ ಕ್ಲಸ್ಟರ್ CRP ಸುಧಾಕರ್, ಪುರಸಭೆ ಸದಸ್ಯ ಜಯರಾಮ ಗುಂಡೂರ್,ಸತೀಶ್ ಶೆಟ್ಟಿ ಬೊಂಡಾಲ, ಶಾಲಾ ನಾಯಕ ಹರಿಪ್ರಸಾದ್, ಮೊದಲಾದವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಮೊದಲು ಶಾಲಾ ಮಕ್ಕಳಿಂದ ತುಳುನಾಡ ವೈಭವ ನೃತ್ಯ ರೂಪಕ ಪ್ರದರ್ಶಿಸಲ್ಪಟ್ಟಿತು.