ಮೂಡುಬಿದಿರೆ, ಆ. 30 (DaijiworldNews/AA): ಬಾಲಿವುಡ್ ನಟಿ ರವೀನಾ ಟಂಡನ್ ಮತ್ತು ಅವರ ಪುತ್ರಿ ರಾಶಾ ಥಡಾನಿ ಅವರು ಮೂಡುಬಿದಿರೆಯ ಐತಿಹಾಸಿಕ ಸಾವಿರ ಕಂಬದ ಬಸದಿಗೆ, ಅಂದರೆ ಜೈನ ಕಾಶಿಗೆ, ಜೀವಂತ ಆನೆಯಂತೆ ಕಾಣುವ ಯಾಂತ್ರೀಕೃತ ಆನೆಯನ್ನು ಕೊಡುಗೆಯಾಗಿ ನೀಡಿದ್ದಾರೆ.

ಈ ಉಪಕ್ರಮವು ಪೆಟಾ ಇಂಡಿಯಾ ಮುಂಬೈ ಶಾಖೆಯಿಂದ ಪ್ರೇರಿತವಾಗಿದೆ. ಪೆಟಾ ಸಂಸ್ಥೆಯು ತರಬೇತಿ ಪಡೆದ ಜೀವಂತ ಆನೆಗಳ ಬದಲಾಗಿ ಯಾಂತ್ರಿಕ ಆನೆಗಳನ್ನು ಬಳಸುವಂತೆ ಪ್ರತಿಪಾದಿಸುತ್ತದೆ. ಏಕೆಂದರೆ ಜೀವಂತ ಆನೆಗಳಿಗೆ ಸಾಮಾನ್ಯವಾಗಿ ಹಿಂಸೆ ನೀಡಲಾಗುತ್ತದೆ. ಜೊತೆಗೆ ಅವುಗಳು ಅರಣ್ಯ ಜೀವನದಿಂದ ವಂಚಿತವಾಗುತ್ತದೆ.
ಹೊಸ ಯಾಂತ್ರಿಕ ಆನೆಯನ್ನು ಪ್ರಸ್ತುತ ಜೈನ ಕಾಶಿಯಲ್ಲಿ ಚಾತುರ್ಮಾಸ ಆಚರಿಸುತ್ತಿರುವ ಆಚಾರ್ಯ 108 ಗುಲಾಬ್ ಭೂಷಣ್ ಮುನಿ ಮಹಾರಾಜ್ ಅನಾವರಣಗೊಳಿಸಿದರು. ಭಾರತದಲ್ಲಿ ಜೈನ ಬಸದಿಯೊಂದಕ್ಕೆ ಯಾಂತ್ರಿಕೃತ ಆನೆಯನ್ನು ಅರ್ಪಿಸುತ್ತಿರುವುದು ಇದೇ ಮೊದಲು.
3 ಮೀಟರ್ ಎತ್ತರ ಮತ್ತು 800 ಕೆಜಿ ತೂಕವಿರುವ ಈ ಆನೆಯನ್ನು ರಬ್ಬರ್, ಫೈಬರ್, ಲೋಹ, ಮೆಶ್, ಫೋಮ್ ಮತ್ತು ಕಬ್ಬಿಣವನ್ನು ಬಳಸಿ ನಿರ್ಮಿಸಲಾಗಿದೆ. ಇದು ಐದು ಮೋಟಾರ್ಗಳ ಸಹಾಯದಿಂದ ಕಾರ್ಯನಿರ್ವಹಿಸುತ್ತದೆ. ವಿದ್ಯುತ್ ಸಂಪರ್ಕ ನೀಡಿದಾಗ ಇದು ನಿಜವಾದ ಆನೆಯಂತೆ ಕಾರ್ಯನಿರ್ವಹಿಸುತ್ತದೆ ಮತ್ತು ಚಲಿಸುತ್ತದೆ.