Karavali
ಬಂಟ್ವಾಳ: 'ಧಾರ್ಮಿಕ ಚಟುವಟಿಕೆಗೆ ಪೋಲಿಸರಿಂದ ಕಡಿವಾಣ ಪ್ರವಾಸೋದ್ಯಮ ಆರ್ಥಿಕತೆಗೆ ಹೊಡೆತ'- ಶಾಸಕ ನಾಯ್ಕ್ ಅಸಮಾಧಾನ
- Fri, Aug 29 2025 07:04:58 PM
-
ಬಂಟ್ವಾಳ, ಆ. 29 (DaijiworldNews/AA): ಧಾರ್ಮಿಕ ಚಟುವಟಿಕೆಗೆ ಪೋಲಿಸರು ಕಡಿವಾಣ ಹಾಕಿದರೆ ಜಿಲ್ಲೆಯ ಪ್ರವಾಸೋದ್ಯಮ ಮತ್ತು ಆರ್ಥಿಕತೆಗೆ ದೊಡ್ಡ ಮಟ್ಟದ ಹೊಡೆತ ಬಿದ್ದಂತೆ, ಇದನ್ನು ಪೊಲೀಸ್ ಇಲಾಖೆ ಆರ್ಥೈಸಿಕೊಂಡು ಕಾರ್ಯನಿರ್ವಹಿಸಬೇಕು, ಜನತೆಯ ಭಾವನೆಯ ಪ್ರಶ್ನೆಯಾಗಿದ್ದು, ಕರ್ತವ್ಯ ನಿರ್ವಹಣೆಯ ವೇಳೆ ಕಾನೂನಿನ ಚೌಕಟ್ಟಿನೊಳಗೆ ಹೊಂದಾಣಿಕೆ ಕೂಡ ಅಗತ್ಯ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಶುಕ್ರವಾರ ಬಂಟ್ವಾಳ ತಾ.ಪಂ.ಎಸ್ ಜಿಎಸ್ ವೈ ಸಭಾಂಗಣದಲ್ಲಿ 2025-26 ರ ಸಾಲಿಮ ಪ್ರಥಮ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗಣೇಶೋತ್ಸವ ಕಾರ್ಯಕ್ರಮಕ್ಕೆ ಅಡ್ಡಿಯಾದ ಕುರಿತು ಬಂದ ದೂರಿನ ಹಿನ್ನಲೆಯಲ್ಲಿ ಬಂಟ್ವಾಳ ನಗರ ಮತ್ತು ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್ ಗಳನ್ನುದ್ದೇಶಿಸಿ ಮಾಲಿನ್ಯ ನಿಯಂತ್ರಣ ಕಾಯ್ದೆ ಪ್ರಕಾರ ಮಧ್ಯರಾತ್ರಿ 12ವರೆಗೂ ಪೊಲೀಸ್ ಇಲಾಖೆ ಅನುಮತಿ ನೀಡಬಹುದಾಗಿದೆ. ಆದರೆ ಹೊಸ ನಿಯಮದಿಂದಾಗಿ ಪೊಲೀಸರು ಕಾರ್ಯಕ್ರಮಕ್ಕೆ ತೆರಳಿ ಮೊಟಕುಗೊಳಿಸುವುದರಿಂದ ಜನರ ಗೊಂದಲ ಮತ್ತು ಭಾವನೆಗಳಿಗೆ ಧಕ್ಕೆಯಾಗಿದೆ. ವಾರ್ಷಿಕವಾಗಿ ನಡೆಯುವ ಇಂತಹ ಕಾರ್ಯಕ್ರಮಗಳ ಸಂಘಟಕರಿಗೆ ಪೂರ್ವಭಾವಿಯಾಗಿ ಮಾಹಿತಿ ನೀಡಬೇಕು ತಪ್ಪಿದಲ್ಲಿ ಮನವೊಲಿಕೆ ಮೂಲಕ ಕ್ರಮ ಜರಗಿಸಿ ಎಂದು ಶಾಸಕರು ಸೂಚಿಸಿದರು.
ಬಂಟ್ವಾಳ ಪ್ರಸ್ತುತ ಶಾಂತಿಯ ವಾತಾವರಣದಲ್ಲಿದೆ ಈ ಮಧ್ಯೆ ಪೊಲೀಸರು ಸಾರ್ವಜನಿಕ ಕಾರ್ಯಕ್ರಮದ ಧ್ವನಿವರ್ಧಕ, ಚೆಂಡೆ, ಭಜನೆಯನ್ನು ಮೊಟಕುಗೊಳಿಸಿದರೆ ಜನರು ಕೂಡ ಪ್ರಚೋದನೆಗೊಳಗಾಗುವ ಸಾಧ್ಯತೆ ಇದೆ. ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿಭಾಹಿಸುವಂತೆ ಶಾಸಕ ರಾಜೇಶ್ ನಾಯ್ಕ್ ಪೊಲೀಸ್ ಅಧಿಕಾರಿಗಳಿಗೆ ಸಲಹೆ ನೀಡಿದರು.
ವಿಧಾನಸಭೆಯಲ್ಲೇ ತಿಳಿಸಿದ್ದೇನೆ
ಬಂಟ್ವಾಳ ಕ್ಷೇತ್ರದಲ್ಲಿ 54
94 ಸಿ,ಹಾಗೂ 146 94 ಸಿಸಿ ಅರ್ಜಿಗಳು ವಿಲೇವಾರಿಗೆ ಬಾಕಿ ಇರುವ ಬಗ್ಗೆ ಉಪತಹಶೀಲ್ದಾರ್ ನರೇಂದ್ರನಾಥ್ ಮಿತ್ತೂರು ಅವರು ಸಭೆಗೆ ಮಾಹಿತಿ ನೀಡುತ್ತಿದ್ದ ವೇಳೆ ಶಾಸಕರು ಪ್ರತಿಕ್ರಿಯಿಸಿ ಬಂಟ್ವಾಳ ಕ್ಷೇತ್ರದ ಅಕ್ರಮ-ಸಕ್ರಮ ಸಿಟ್ಟಿಂಗ್ ತಾನು ಮಾಡುವುದೇ ಇಲ್ಲ ಈ ಕುರಿತ ತನ್ನ ಅಧಿಕಾರವನ್ನು ಜಿಲ್ಲಾಧಿಕಾರಿವರಿಗೆ ವಹಿಸಿ ಎಂದು ವಿಧಾನಸಬವೆಯಲ್ಲು ಕೂಡ ಪ್ರಸ್ತಾವಿಸಿದ್ದೆನೆ ಎಂದರು.ಶೆಡ್ ಮಾತ್ರವಲ್ಲ ಮನೆ ನಿರ್ಮಿಸಿ ಕುಳಿತವರಿಗೂ ವಿವಿಧ ನೆಪ ಹೇಳಿ ಹಕ್ಕುಪತ್ರದ ಮಂಜೂರಾತಿ ನೀಡುತಿಲ್ಲ ಎಂದು ನಾಮನಿರ್ದೇಶಿತ ಸದಸ್ಯ ಮಹಮ್ಮದ್ ನಂದಾವರ ಗಮನಸೆಳೆದರು. ಈ ಬಗ್ಗೆ ಪರಿಶೀಲಿಸುವಂತೆ ಶಾಸಕರು ಸಂಬಂಧಿಸಿದ ಅಧಿಕಾರಿಗೆ ಸೂಚಿಸಿದರು.
ಗರಂ ಆದ ಶಾಸಕರು.ಸಭೆ ಆರಂಭದಲ್ಲಿ ತಹಶೀಲ್ದಾರ್ ಸಹಿತ ಕೆಲ ತಾಲೂಕು ಅಧಿಕಾರಿಗಳು ಗೈರು ಹಾಕರಾದ ಹಿನ್ನಲೆಯಲ್ಲಿ ಗರಂ ಆದ ಶಾಸಕರು ಒಂದು ಹಂತದಲ್ಲಿ ಸಭೆಯನ್ನು ಮುಂದೂಡುವಂತೆ ಸೂಚಿಸಿದರು. ಅಷ್ಟೊತ್ತಿಗೆ ತಹಶೀಲ್ದಾರ್ ಹೊರತುಪಡಿಸಿ ಉಳಿದ ಅಧಿಕಾರಿಗಳು ಸಭೆಗೆ ಹಾಜರಾದರು.
ಬಂಟ್ವಾಳ ತಾ.ನಲ್ಲಿ 36,796 ಮಂದಿ ಫಲಾನುಭವಿಗಳಿಗೆ ವಿವಿಧ ಪಿಂಚಣಿ ದೊರೆಯುತ್ತಿದೆ ಎಂದು ಉಪತಹಶೀಲ್ದಾರ್ ನರೇಂದ್ರ ಮಿತ್ತೂರು ಅವರು ಸಭೆಗೆ ಮಾಹಿತಿ ನೀಡಿದ ವೇಳೆ ಕೆಲ ಗ್ರಾಮಗಳಲ್ಲಿ ನವೀಕರಣ ಪ್ರಕ್ರಿಯೆ ನಡೆಯುತ್ತಿದ್ದು, ಈ ಸಂದರ್ಭ ಅಶಕ್ತರು, ಅನಾರೋಗ್ಯಪೀಡಿತರು ವಿವಿಧ ಪಿಂಚಣಿಗಳಿಂದ ಬಿಟ್ಟುಹೋಗುವ ಸಾಧ್ಯತೆ ಇದ್ದು, ಅಂತಹವರ ಮನೆಗೆ ತೆರಳಿ ಸೌಲಭ್ಯ ಒದಗಿಸುವ ಕಾರ್ಯ ವಿ.ಎ.ಗಳ ಮೂಲಕ ಅಗಬೇಕು ಎಂದು ನಾಮನಿರ್ದೇಶಿತ ಸದಸ್ಯ ಮಹಮ್ಮದ್ ನಂದಾವರ ಸಲಹೆ ನೀಡಿದರು.
ಮಳೆಯಿಂದಾಗಿ ಹಾನಿಗೊಳಗಾದ ಸರಕಾರಿ ಶಾಲೆಗಳ ದುರಸ್ಥಿ ಕಾರ್ಯಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಾಗೆಯೇ ಸರಕಾರಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಗಳಿಗೆ ಅನುಗುಣವಾಗಿ 253 ಅತಿಥಿ ಶಿಕ್ಷಕರನ್ನು ಹಾಗೂ ಪ್ರೌಢ ಸಾಲೆಗಳಿಗೆ 81 ಅತಿಥಿ ಶಿಕ್ಷಕರನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಶಿಕ್ಷಣಾಧಿಕಾರಿ ಮಂಜುನಾಥ್ ಅವರು ಸಭೆಗೆ ಮಾಹಿತಿ ನೀಡಿದರು.
ಕಾವಳಮೂಡೂರು ಗ್ರಾ.ಪಂ. ಶಾಲಾ ಆಟದ ಮೈದಾನದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸ್ಥಳ ಗುರುತಿಸಲಾಗಿದ್ದು, ಇದನ್ನು ಮರುಪರಿಶೀಲಿಸುವಂತೆ ಕೆಡಿಪಿ ಸದಸ್ಯ ಸದಾನಂದ ಶೆಟ್ಟಿ ಸಭೆಯ ಗಮನಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿ ಇಒ ಸಚ್ಚಿನ್ ಕುಮಾರ್ ಇಲ್ಲಿ ಒಣಕಸ ಸಂಗ್ರಹಕ್ಕೆ ಮಾತ್ರ ಅವಕಾಶವಿರುದಾಗಿದೆ. ಆದರೂ ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ತಾಲೂಕಿನಲ್ಲಿ ವಿವಿಧ ಸಾರ್ವಜನಿಕ ಉದ್ದೇಶಗಳಿಗೆ ಒಟ್ಟು 504,83.75 ಎಕ್ರೆ ಜಮೀನು ಕಾದಿರಿಸಲಾಗಿದೆ ಎಂದು ಕಂದಾಯ ಇಲಾಖೆಯಿಂದ ಸಭೆಗೆ ಮಾಹಿತಿ ನೀಡಲಾಯಿತು.
ತಾಲೂಕಿನಲ್ಲಿ ಉಂಟಾಗುತ್ತಿರುವ 9/11 ಸಮಸ್ಯೆಯ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆನಡೆಯಿತು.ಕೆಡಿಪಿ ಸದಸ್ಯ ಮಹಮ್ಮದ್ ನಂದಾವರ ವಿಷಯ ಪ್ರಸ್ತಾವಿಸಿ 9/11 ಸಮಸ್ಯೆ ಪರಿಹರಿಸುವುದು ಯಾರು ಹೊಣೆ? ಗ್ರಾ.ಪಂ.ನಲ್ಲಿ ಒಬ್ಬೊರು ಇನ್ನೊಬ್ಬರಿಗೆ ಬೊಟ್ಟು ಮಾಡುವುದಲ್ಲದೆ ಸಮಸ್ಯೆ ಪರಿಹರಿಸುವುದಿಲ್ಲ, ಈ ನಿಟ್ಟಿನಲ್ಲಿ ಇಒ ಅವರು ಸೂಕ್ತ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಒ ಗ್ರಾ.ಪಂ. ಕಾರ್ಯದರ್ಶಿಯವರೇ ಇದಕ್ಕೆ ಹೊಣೆ ಅವರೇ ಇದನ್ನು ವಿಲೇವಾರಿ ಮಾಡಬೇಕು ಇದಕ್ಕೆ ಪ್ರತ್ಯೇಕ ಆದೇಶದ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿ ಚರ್ಚೆಗೆ ತೆರೆ ಎಳೆದರು.
80 ಲ.ರೂ.ಬಾಕಿ
ಸಹಕಾರ ಸಂಘಗಳ ಅಡಿಯಲ್ಲಿ ಕಾರ್ಯನಿರ್ವಹಿಸುವ ಪಡಿತರ ಬಾಬ್ತು ಸರಕಾರದಿಂದ 80 ಲಕ್ಷರೂ. ಬರಲು ಬಾಕಿ ಇದೆ ಎಂದು ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ ಸಭೆಯ ಗಮನಸೆಳೆದರು. ಉಡುಪಿ ಜಿಲ್ಲೆಗೆ ಬಾಕಿ ಮೊತ್ತವನ್ನು ಪಾವತಿಸಲಾಗಿದ್ದು, ದ.ಕ.ಜಿಲ್ಲೆಗೆ ಇನ್ನು ಬಾಕಿ ಇದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ರಾಜೇಶ್ ನಾಯ್ಕ್ ಅವರು ಈ ಕುರಿತು ಆಹಾರ ಸರಬರಾಜು ಸಚಿವರ ಜೊತೆ ಮಾತುಕತೆ ನಡೆಸಲಾಗುವುದು ಬಾಕಿ ಮೊತ್ತದಪಟ್ಟಿ ನೀಡುವಂತೆ ಸೂಚಿಸಿದರು.ಡಯಾಲಿಸಿಸ್ ಕೇಂದ್ರ:
ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಯ ಪಕ್ಕದಲ್ಲಿರುವ ಪಂಜೆಂಮಗೇಶರಾಯರ ನಿವಾಸವನ್ನು ಡಯಾಲಿಸಿಸ್ ಕೇಂದ್ರವನ್ನಾಗಿ ಮಾರ್ಪಾಡು ಗೊಳಿಸುವ ಸಾಧ್ಯತೆ ಬಗ್ಗೆ ಪರಿಶೀಲಿಸುವಂತೆ ಶಾಸಕರು ಸಲಹೆ ನೀಡಿದರು. ಅದೇ ರೀತಿ ಆಸ್ಪತ್ರೆಗೆ ಅಗತ್ಯವಿರುವ ಅರವಳಿಕೆ ಹಾಗೂ ಸ್ತ್ರೀರೋಗ ತಜ್ಞರ ನೇಮಕಗೊಳಿಸುವ ನಿಟ್ಟಿನಲ್ಲಿ ತಾನು ಈಗಾಗಲೇ ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸಿದ್ದು, ಇಲಾಖಾ ಮಟ್ಟದಲ್ಲಿಯು ಒತ್ತಡ ಹಾಕುವಂತೆ ಆರೋಗ್ಯಾಧಿಕಾರಿಯವರಿಗೆ ಶಾಸಕರು ಸೂಚಿಸಿದರು.ಚಾಲಕ, ನಿರ್ವಾಹಕರ ನಿಯೋಜನೆಯಾಗಿದ್ದು, ಶೀಘ್ರ ಹೊಸರೂಟಿನಲ್ಲಿ ಸರಕಾರಿ ಬಸ್ ಓಡಿಸಲಾಗುವುದು, ನಿಲುಗಡೆಯಾದ ಕಡೇಶ್ವಾಲ್ಯಕ್ಕು ಬಸ್ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್ ಆರ್ ಟಿಸಿ ಅಧಿಕಾರಿ ಶಾಸಕರ ಪ್ರಶ್ನೆಗೆ ಉತ್ತರಿಸಿದರು.
ಮೈಕ್ ದೂರ ಇಟ್ಟ ಶಾಸಕರು
ಗಣೇಶ್ ಚತುರ್ಥಿ ಸಹಿತ ಹಬ್ಬಗಳ ಸಲುವಾಗಿ ಧ್ವನಿವರ್ಧಕ ಬಳಕೆಯಲ್ಲಿ ಡಿಸಿಬಲ್ ಮಿತಿಯನ್ನು ರಾಜ್ಯ ಸರಕಾರ ಜಾರಿಗೆ ತಂದಿರುವ ಕ್ರಮವನ್ನು ಶಾಸಕ ರಾಜೇಶ್ ನಾಯ್ಕ್ ಅವರು ಖಂಡಿಸಿ ಕೆಡಿಪಿ ಸಭೆಯುದ್ದಕ್ಕು ಮೈಕನ್ನು ಬಳಸದೆ ದೂರ ಇಟ್ಟು ತನ್ನ ಅಸಮಾಧಾನವನ್ನು ಈ ಮೂಲಕ ವ್ಯಕ್ತಪಡಿಸಿದರು.ಇದಕ್ಕೂ ಮುನ್ನ ವಿಕಲಚೇತನರಿಗೆ ಟೈಲರಿಂಗ್ ಯಂತ್ರ ವಿತರಣೆ, ನೀರಿನ ಬೆಡ್ ವಿತರಣೆ, ಶ್ರವಣಸಾಧನ, ವಾಕಿಂಗ್ ಸ್ಟಿಕ್ ಮೊದಲಾದ ಸಲಕರಣೆಯನ್ನು ಶಾಸಕರು ಫಲಾನುಭವಿಗಳಿಗೆ ವಿತರಿಸಿದರು.
ತಾ.ಪಂ.ಇಒ ಸಚ್ಚಿನ್ ಕುಮಾರ್, ಆಡಳಿತಾಧಿಕಾರಿ ಮಂಜುನಾಥ್, ಪಂಚ ಗ್ಯಾರಂಟಿ ಅನುಷ್ಠಾನ ಬಂಟ್ಚಾಳ ತಾ. ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ ವೇದಿಕೆಯಲ್ಲಿದ್ದರು. ನಾಮನಿರ್ದೇಶಿತ ಸದಸ್ಯರಾದ ಗಿರೀಶ್ ಪರ್ವೆ, ಅಬ್ದುಲ್ಲಾ ಎ.ಶೋಭಾ ರೈ ಅವರು ಉಪಸ್ಥಿತರಿದ್ದರು. ತಾಲೂಕಿನ ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದು, ಮಾಹಿತಿ ನೀಡಿದರು.