ಮೂಡಬಿದಿರೆ,ಆ. 29 (DaijiworldNews/AK): ಮಂಕುಬೂದಿ ಎರಚಿ ಮಹಿಳೆಯೊಬ್ಬರಿಂದ ನಗ-ನಗದು ಎಗರಿಸಿಕೊಂಡು ವಂಚಿಸಿದ ಯುವಕನ ವರ್ತಿನೆಯಿಂದ ನೊಂದ ಮಹಿಳೆ ಬದುಕಿಗೆ ಅಂತ್ಯಹೇಳಿದ ಘಟನೆ ಮೂಡುಬಿದಿರೆ ತೋಡಾರಿನಲ್ಲಿ ನಡೆದಿದೆ.

ಮಂಗಳೂರು ಉಳ್ಳಾಲದ ಕಲ್ಲಾಪು ಮೂಲದ ಮಹಿಳೆ ಶಫ್ರೀನಾ ಬಾನು(31) ಘಟನೆಯಲ್ಲಿ ನೊಂದು ಆತ್ಮಹತ್ಯೆ ಮಾಡಿಕೊಂಡವರು.
ಕಳೆದ 14 ವರ್ಷಗಳ ಹಿಂದೆ ಮೂಡುಬಿದಿರೆ ಬೆಳುವಾಯಿ ನವಾಝ್ ರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಶಫ್ರೀನಾ ಬಾನು ತೋಡಾರು ಗ್ರಾಮದ ಏರ್ ಇಂಡಿಯಾ ನಾಮಾಂಕಿತದ ಅಪಾರ್ಟ್ ಮೆಂಟ್ ನಲ್ಲಿರುವ ಫ್ಲಾಟ್ ನಂಬ್ರ 402 ರಲ್ಲಿ ವಾಸವಾಗಿದ್ದರು. ಈ ದಂಪತಿಗೆ ಓರ್ವ ಪುತ್ರ, ಓರ್ವ ಪುತ್ರಿಯೂ ಇದ್ದಾರೆ. ಮಂಗಳೂರಿನಲ್ಲಿ ಪತಿ ನವಾಝ್ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರು.
ಈ ನಡುವೆ ದಂಪತಿಗಳಿಗೆ ಪರಿಚಯಸ್ಥನಾಗಿದ್ದ ಪುತ್ತಿಗೆಯ ನಿವಾಸಿ ಕ್ರಿಕೆಟ್ ಆಟಗಾರ ಅಶ್ರಫ್ ಎಂಬಾತನು ಕಳೆದ 7 ತಿಂಗಳ ಹಿಂದೆ ನವಾಝ್ ಪತ್ನಿ ಶಫ್ರೀನಾ ಬಾನುನಿಂದ ರೂ 2 ಲಕ್ಷ ನಗದು ಹಾಗೂ 3 ಲಕ್ಷ ರೂಪಾಯಿ ಮೌಲ್ಯದ ಬಂಗಾರವನ್ನು ಪಡೆದುಕೊಂಡಿದ್ದನು.
ಮಂಕುಬೂದಿ ಎರಚಿ ನಗ-ನಗದು ಎಗರಿಸಿದ ಆಶ್ರಫ್ ನಲ್ಲಿ ಶಫೀನಾ ಬಾನು ರವರು ಹಲವಾರು ಬಾರಿ ವಿನಂತಿಸಿ ನನ್ನಿಂದ ಎಗರಿಸಿದ ನಗ-ನಗದು ಹಿಂತಿರುಗಿಸುವಂತೆ ಕೇಳಿದರೂ, 'ನಾಳೆ....ನಾಳೆ....ಅಂತ ಹೇಳುತ್ತಾ ದಿನ ದೂಡುತ್ತಿದ್ದನು. ಆಗಸ್ಟ್ 26ರಂದು ನಗ-ನಗದು ಹಿಂತಿರುಗಿಸುವ ವಾಗ್ದಾನ ನೀಡಿದ ಆಶ್ರಫ್, ಆ ದಿನ ಬೆಳಿಗ್ಗೆ 06.00ಗಂಟೆಗೆ ಶಫೀನಾ ಬಾನು ಅವರಿಗೆ ಕರೆ ಮಾಡಿ "ಒಂದೋ ನೀನು ನನಗೆ ಇನ್ನೂ ಕಾಲಾವಕಾಶ ನೀಡಬೇಕು . ಇಲ್ಲವಾದಲ್ಲಿ ನೀನು ನೀಡಿದ ಹಣ ಮತ್ತು ಒಡವೆಗೆ ಏನು ಪೂಫ್ ಇದೆ" ಎಂದು ಉಡಾಫೆಯಾಗಿ ಮಾತನಾಡಿದ್ದನು.
ಪುತ್ತಿಗೆಯ ಆಶ್ರಫ್ ನ ಪ್ರತಿಕ್ರಿಯೆಯಿಂದ ಬೆಳಿಗ್ಗೆ 7.00 ಗಂಟೆ ಯಿಂದ 07.45 ಗಂಟೆಯ ಮಧ್ಯಾವಧಿಯಲ್ಲಿ ಮನೆಯಲಿ ಯಾರೂ ಇಲ್ಲದ ಸಮಯ ಶಫೀನಾ ಬಾನು ರವರು ಮನೆಯ ಒಳಗಿನ ಕೋಣೆಯ ಫ್ಯಾನಿಗೆ ನೈಲಾನ್ ಬಟ್ಟೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಶಫೀನಾ ಬಾನು ರವರ ಪತಿ ನವಾಝ್ ರವರು ನೀಡಿದ ದೂರಿನನ್ವಯ ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ಪುತ್ತಿಗೆಯ ಆಶ್ರಫ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದೆ. ಮೂಡಬಿದಿರೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ರವರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.