ಮಂಗಳೂರು, ಆ. 29 (DaijiworldNews/AA): ಮಂಗಳೂರಿನ ಮರವೂರು ಬಳಿ ಇರುವ ಏರ್ಪೋರ್ಟ್ ರಸ್ತೆಯಲ್ಲಿ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರಿಗೆ ಮತ್ತು ಪ್ರಯಾಣಿಕರಿಗೆ ಗಂಭೀರ ಅಪಾಯ ತಂದೊಡ್ಡಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇದು ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ಸಾರ್ವಜನಿಕ ಸಾರಿಗೆ ಮತ್ತು ತುರ್ತು ಸೇವೆಗಳ ವಾಹನಗಳು ಸೇರಿದಂತೆ ದಿನನಿತ್ಯ ಭಾರೀ ಪ್ರಮಾಣದಲ್ಲಿ ವಾಹನಗಳು ಸಂಚರಿಸುತ್ತವೆ.






ಹಾನಿಗೊಳಗಾದ ಈ ರಸ್ತೆಯಿಂದಾಗಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಇನ್ನು ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾದ ಪರಿಣಾಮ ಮಳೆಗಾಲದಲ್ಲಿ ಅಥವಾ ರಾತ್ರಿಯ ಹೊತ್ತಿನಲ್ಲಿ ಅಪಘಾತವುಂಟಾಗುವ ಸಂಭವ ಹೆಚ್ಚಾಗಿದೆ. ಹೀಗಾಗಿ ರಸ್ತೆಯು ಮತ್ತಷ್ಟು ಹದಗೆಡದಂತೆ ತುರ್ತು ದುರಸ್ತಿ ಕಾರ್ಯದ ಅಗತ್ಯವಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಜನಪ್ರತಿನಿಧಿಗಳು ಮತ್ತು ಇಂಜಿನಿಯರ್ಗಳು ಈ ಏರ್ಪೋರ್ಟ್ ರಸ್ತೆಯನ್ನು ಆಗಾಗ್ಗೆ ಬಳಸುತ್ತಿದ್ದರೂ, ಈ ರಸ್ತೆಯನ್ನು ದುರಸ್ತಿ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ. ಸದ್ಯ ಮಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ರಸ್ತೆಯಲ್ಲಿನ ಗುಂಡಿಗಳು ಮತ್ತಷ್ಟು ಆಳವಾಗಿ, ವಾಹನ ಸವಾರರಿಗೆ ಹೆಚ್ಚಿನ ಅಪಾಯವನ್ನುಂಟು ಮಾಡುತ್ತಿವೆ.
ಜೊತೆಗೆ ಸರಿಯಾದ ಬೀದಿ ದೀಪಗಳ ಕೊರತೆಯೂ ಮತ್ತಷ್ಟು ಅಪಾಯವನ್ನು ಹೆಚ್ಚಿಸುತ್ತದೆ. ರಾತ್ರಿಯ ಹೊತ್ತಿನಲ್ಲಿ ರಸ್ತೆಯಲ್ಲಿನ ಗುಂಡಿಗಳು ಸರಿಯಾಗಿ ಕಾಣಿಸದೇ ಮತ್ತಷ್ಟು ಗಂಭೀರ ಅಪಘಾತಗಳಿಗೆ ಕಾರಣವಾಗಬಹುದು.
ಯಾವುದೇ ವಿಐಪಿ ಜಿಲ್ಲೆಗೆ ಭೇಟಿ ನೀಡಿದಾಗ ಮಾತ್ರ ದುರಸ್ತಿ ಕಾರ್ಯವನ್ನು ಕೂಡಲೇ ಕೈಗೊಳ್ಳಲಾಗುತ್ತದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಸಾಮಾನ್ಯ ದಿನಗಳಲ್ಲಿ ವಾಹನ ಸವಾರರು ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ವಾಹನ ಚಲಾಯಿಸುವ ಪರಿಸ್ಥಿತಿ ಎದುರಾಗಿದೆ. ಇದರಿಂದ ವಾಹನಗಳು ಹಾನಿಯಾಗುವುದರ ಜೊತೆಗೆ ವಾಹನ ಸವಾರರೂ ಅಪಾಯವನ್ನು ಎದುರಿಸುತ್ತಿದ್ದಾರೆ.