ಮಂಗಳೂರು, ಆ 29 (DaijiworldNews/TA): ಜೀವನದಲ್ಲಿ ನೀವು ಯಾವುದೇ ಗುರಿಯನ್ನು ಇಟ್ಟುಕೊಂಡಿರಬಹುದು. ಆದರೆ ಆ ಗುರಿಯತ್ತ ಸತತ ಪರಿಶ್ರಮ ಹಾಕಿ, ಮುಂದಡಿ ಇಡುವುದು ಅತ್ಯಂತ ಮುಖ್ಯವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ ಹೆಚ್.ವಿ. ತಿಳಿಸಿದರು.

ದೇರಳಕಟ್ಟೆಯಲ್ಲಿ ಇತ್ತೀಚಿಗೆ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ದೇಶದಲ್ಲಿ ಪ್ರತೀ ವರ್ಷ 12 ರಿಂದ 13 ಲಕ್ಷ ಮಂದಿ ಯುಪಿಎಸ್ ಸಿ ಪರೀಕ್ಷೆ ಬರೆಯುತ್ತಿದ್ದರೂ ಕೇವಲ ಒಂದು ಸಾವಿರ ಆಕಾಂಕ್ಷಿಗಳು ಮಾತ್ರ ಸಫಲತೆ ಕಾಣುತ್ತಾರೆ. 2012ರಲ್ಲಿ ನಾನು ಮೊದಲ ಬಾರಿ ಐಎ ಎಸ್ ಪರೀಕ್ಷೆ ಬರೆದಿದ್ದೆ. ಆದರೆ ಕೇವಲ ಅಂಕಗಳಿಂದ ಅವಕಾಶ ವಂಚಿತನಾಗಿದ್ದೆ.
ಹಾಗಾಗಿ 2013ರಲ್ಲಿ ಮತ್ತೆ ಪ್ರಯತ್ನಿಸಿದ್ದರೂ ಹಿಂದಿನ ಬಾರಿಯಂತೆ ಎರಡು ಅಂಕಗಳಿಂದ ಅವಕಾಶ ತಪ್ಪಿತ್ತು. ಆದರೆ ಮೂರನೇ ಬಾರಿ ಇನ್ನಷ್ಟು ಕಠಿಣ ಅಭ್ಯಾಸ ನಡೆಸಿ, ಪ್ರಯತ್ನಿಸಿದರೂ ವಿಫಲತೆ ಕಂಡಿದ್ದೆ. ಆದರೆ ನಾಲ್ಕನೇ ಪ್ರಯತ್ನದಲ್ಲಿ ದೇಶದಲ್ಲೇ 48 ರ್ಯಾಂಕ್ ಗಳಿಸಿ ಪಾಸಾಗಿದ್ದೆ. ಹಾಗಾಗಿ ನಮ್ಮ ಗುರಿ ಎಷ್ಟೇ ಕಠಿಣವಿದ್ದರೂ ಸತತ ಪರಿಶ್ರಮ ಹಾಕಿ ಮುಂದೆ ಹೋಗುವುದು ಅತೀ ಮುಖ್ಯ ಎಂದು ಅವರು ತಿಳಿಸಿದರು.