ಮಂಗಳೂರು, ಆಗಸ್ಟ್ 28 (DaijiworldNews/TA): ತುಳುನಾಡಿನ ಕೃಷಿ ಪರಂಪರೆ ಪ್ರಕೃತಿ ಆರಾಧನೆ, ಸೌಹಾರ್ದ ಹಾಗೂ ಸಮೃದ್ಧ ಬದುಕಿನ ಆಶಯವನ್ನು ಪೋಷಿಸಿಕೊಂಡಿದೆ. ಮನೆ ತುಂಬಿಸುವ ಹಿನ್ನೆಲೆಯಲ್ಲಿ ಭತ್ತದ ತೆನೆಯನ್ನು ಕಟ್ಟುವ ಸಂಪ್ರದಾಯ ಪರಸ್ಪರ ವಿಶ್ವಾಸ ಮತ್ತು ಪ್ರೀತಿ ಬೆಳೆಸುವ ಆಚರಣೆಯಾಗಿ ಮುಂದುವರಿದಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಹೇಳಿದರು.


ಕುಲಶೇಖರದ ಕನ್ನಗುಡ್ಡೆಯ ಕೊರಗತನಿಯ ಕ್ಷೇತ್ರದಲ್ಲಿ ನಡೆದ ತೆನೆ ಹಾಗೂ ಕಬ್ಬು ಹಂಚುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾಜಿ ಶಾಸಕ ಜೆ.ಆರ್. ಲೋಬೋ ಅವರು, “ಕೃಷಿ ಬದುಕು ಎಲ್ಲರನ್ನು ಒಂದಾಗಿಸುವ ಪರಂಪರೆಯನ್ನು ಹೊಂದಿದೆ. ಕ್ರೈಸ್ತರು ಆಚರಿಸುವ ತೆನೆ ಹಬ್ಬವು ತುಳುನಾಡಿನಲ್ಲಿ ಕುರಲ್ ಪರ್ಭ ಎಂದು ಜನಾನುರಾಗಿಯಾಗಿದ್ದು, ಇದು ಸಾಮರಸ್ಯದ ಪ್ರತೀಕವಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿ-ಫೋರ್ ಟಿವಿ ವಾಹಿನಿಯ ಮುಖ್ಯಸ್ಥ ಲಕ್ಷ್ಮಣ್ ಕುಂದರ್, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಕಾರ್ಯಕ್ರಮದ ಸಂಘಟಕ ಡೆನಿಸ್ ಡಿಸಿಲ್ವಾ, ಮಾಜಿ ಕಾರ್ಪೊರೇಟರ್ ಪ್ರಕಾಶ್, ಕೆಎಸ್ಆರ್ಟಿಸಿ ಮಾಜಿ ನಿರ್ದೇಶಕ ಟಿ.ಕೆ. ಸುಧೀರ್, ಶೇಖರ್ ಪೂಜಾರಿ ಸೇರಿದಂತೆ ಸಂಘಟನಾ ಸಮಿತಿ ಸದಸ್ಯರಾದ ಪದ್ಮನಾಭ ಕರ್ಕೇರ ನೂಜಿ, ರಿತೇಶ್ ಬಿ.ಯನ್, ಉಮೇಶ್ ನೂಜಿ, ಅಶೋಕ್ ನಾಯಕ್, ಸುಲೋಚನಾ ದೇವದಾಸ್, ಸದಾನಂದ ಬಾಬು, ಮಿಥುನ್, ಮಹೇಶ್ ಶೆಟ್ಟಿ ಕನ್ನಗುಡ್ಡೆ, ದಯಾನಂದ ನೂಜಿ ಉಪಸ್ಥಿತರಿದ್ದರು.
ಡೆನಿಸ್ ಡಿಸಿಲ್ವಾ ಅವರ ನೇತೃತ್ವದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ "ತೆನೆ ಮತ್ತು ಕಬ್ಬು ವಿತರಣಾ" ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ನೂಜಿ, ಸರಿಪಲ್ಲ, ಕನ್ನಗುಡ್ಡೆ ಮತ್ತು ಶಿವನಗರದ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.