ಕಾಸರಗೋಡು, ಆ. 25 (DaijiworldNews/AA): ಹೊಸದುರ್ಗ ಠಾಣಾ ವ್ಯಾಪ್ತಿಯ ಪಡನ್ನ ಕಾಡ್ ನಲ್ಲಿ ಹತ್ತು ವರ್ಷದ ಬಾಲಕಿಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ನಡೆಸಿ ಕಿವಿಯೋಲೆಯನ್ನು ದರೋಡೆಗೈದ ಪ್ರಕರಣದ ಪ್ರಮುಖ ಆರೋಪಿಗೆ ಹೊಸದುರ್ಗ ಫೋಕ್ಸೋ ನ್ಯಾಯಾಲಯ ಅವಳಿ ಜೀವಾವಧಿ ಸಜೆ ವಿಧಿಸಿ ತೀರ್ಪು ನೀಡಿದೆ. ಕೃತ್ಯಕ್ಕೆ ಸಹಕರಿಸಿದ ಆರೋಪಿಯ ಸಹೋದರಿಗೆ ದಂಡ ವಿಧಿಸಲಾಗಿದೆ.


ಮಡಿಕೇರಿ ನಾಪೋಕ್ಲುವಿನ ಪಿ.ಎಂ ಸಲೀಂ (49)ಗೆ ಶಿಕ್ಷೆ ವಿಧಿಸಲಾಗಿದೆ. ಎರಡನೇ ಆರೋಪಿ ಈತನ ಸಹೋದರಿ ಸುಹೈಬಾ(21)ಗೆ ಸೋಮವಾರ ನ್ಯಾಯಾಲಯ ಅವಧಿ ಮುಗಿಯುವ ತನಕ ಶಿಕ್ಷೆ ಹಾಗೂ ಒಂದು ಸಾವಿರ ರೂ. ದಂಡ ವಿಧಿಸಿದೆ. ಹೊಸದುರ್ಗ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಪಿ. ಎಂ ಸುರೇಶ್ ಶಿಕ್ಷೆ ವಿಧಿಸಿದರು. ಇಬ್ಬರು ತಪ್ಪಿತಸ್ಥರೆಂದು ಶನಿವಾರ ನ್ಯಾಯಾಲಯ ತೀರ್ಪು ನೀಡಿತ್ತು.
2024 ರ ಮೇ 24 ರಂದು ವಿಶೇಷ ತನಿಖಾ ತಂಡ ಆಂಧ್ರಪ್ರದೇಶದಿಂದ ಬಂಧಿಸುವಲ್ಲಿ ಯಶಸ್ವಿಯಾಗಿತ್ತು. ಸುಹೈಬಾ ಬಾಲಕಿಯ ಚಿನ್ನಾಭರಣ ಮಾರಾಟ ಮಾಡಿದ ಪ್ರಕರಣದ ಆರೋಪಿಯಾಗಿದ್ದಾಳೆ.
2024 ರ ಮೇ 15ರಂದು ಮುಂಜಾನೆ ಪಡನಕ್ಕಾಡ್ ನಲ್ಲಿರುವ ಮನೆಯಿಂದ ಮಗು ಮಲಗಿದ್ದಾಗ ಅಪಹರಿಸಿದ್ದ ದುಷ್ಕರ್ಮಿಯು ಆಕೆಯ ಚಿನ್ನದ ಕಿವಿಯೋಲೆಗಳನ್ನು ದೋಚಿಕೊಂಡು ಒಂದು ಕಿಲೋಮೀಟರ್ ದೂರದಲ್ಲಿ ಅವಳನ್ನು ಬಿಟ್ಟು ಪರಾರಿಯಾಗಿದ್ದ. ವೈದ್ಯಕೀಯ ವರದಿಯ ನಂತರ ಲೈಂಗಿಕ ದೌರ್ಜನ್ಯ ನಡೆದಿರುವುದೂ ದೃಢಪಟ್ಟಿತ್ತು.
ಬಾಲಕಿಯನ್ನು ಅಡುಗೆಮನೆಯ ಬಾಗಿಲಿನಿಂದ ಕರೆದೊಯ್ದು ಹತ್ತಿರದ ಗದ್ದೆಯಲ್ಲಿ ತೊರೆದು ಪರಾರಿ ಯಾಗಿದ್ದನು. ಅಲ್ಲಿಯೇಸಮೀಪದ ಮನೆಗೆ ತೆರಳಿ ಮಾಹಿತಿ ನೀಡಿದ ಬಾಲಕಿಯರು ತನ್ನ ಮನೆಯವರನ್ನು ಸಂಪರ್ಕಿಸಿದ್ದಾಳೆ. ಮನೆಯವರು ಕರೆದೊಯ್ದು ವಿಚಾರಿಸಿದಾಗ ಕೃತ್ಯ ಬೆಳಕಿಗೆ ಬಂದಿತ್ತು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಎಸ್ಐಟಿಗೆ ತನಿಖೆ ಒಪ್ಪಿಸಲಾಗಿತ್ತು. ವಿಚಾರಣೆ ಸಂದರ್ಭದಲ್ಲಿ 62 ಸಾಕ್ಷಿಗಳನ್ನು ವಿಸ್ತರಿಸಿತ್ತು. ಚಿನ್ನದ ಬೆಂಡೋಲೆ ಮಾರಾಟ ಮಾಡಲು ಸಹಾಯ ಮಾಡಿದ್ದರಿಂದ ಎರಡನೇ ಆರೋಪಿ ಎಂದು ಗುರುತಿಸಲಾಗಿತ್ತು.
ಬಂಧಿತನಾಗಿ 39 ನೇ ದಿನ ಆರೋಪ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. 2025 ರ ಜನವರಿ ಯಿಂದ ವಿಚಾರಣೆ ಆರಂಭಗೊಂಡಿತ್ತು.
ಚಿನ್ನಾಭರಣ ಮಾರಾಟ ಮಾಡಿ ಲಭಿಸಿದ್ದ ಹಣದಿಂದ ಮುಂಬೈ, ಬೆಂಗಳೂರು ಮೊದಲಾದೆಡೆ ತಲೆಮರೆಸಿ ಕೊಂಡಿದ್ದ ಈತ ಕೊನೆಗೂ ಆಂಧ್ರ ಪ್ರದೇಶದಿಂದ ಬಂಧಿಸಲಾಗಿತ್ತು.
ಉತ್ತರ ವಲಯ ಉಪ ನಿರೀಕ್ಷಕ ಥಾಮ್ಸನ್ ಜೋಸ್ ಮತ್ತು ಜಿಲ್ಲಾ ಪೊಲೀಸ್ ಮುಖ್ಯಸ್ಥ ಪಿ ಬಿಜೋಯ್ ನೇತೃತ್ವದ ತಂಡವು ತನಿಖೆಯ ಮೇಲ್ನೋಟ ವಹಿಸಿತ್ತು.
20 ಸದಸ್ಯರನ್ನೊಳಗೊಂಡ ಎಸ್ಐಟಿ ತನಿಖಾ ತಂಡದಲ್ಲಿ ಡಿವೈಎಸ್ಪಿಗಳಾದ ಲತೀಶ್, ಸಿ. ಕೆ ಸುನೀಲ್ಕುಮಾರ್ ಮತ್ತು ಪಿ ಬಾಲಕೃಷ್ಣನ್ ನಾಯರ್ ಅವರ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ಎಂ. ಪಿ ಆಜಾದ್ ಮತ್ತು ಸಬ್ ಇನ್ಸ್ಪೆಕ್ಟರ್ಗಳಾದ ಅಖಿಲ್ ಮತ್ತು ಎಂಟಿಪಿ ಸೈಫುದ್ದೀನ್ ಮೊದಲಾದವರಿದ್ದರು.