ಉಳ್ಳಾಲ, ಆ. 22 (DaijiworldNews/TA): ಉಳ್ಳಾಲದ ತೊಕ್ಕೊಟ್ಟು ಸಮೀಪದ ಕಾಪಿಕಾಡಿನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಪಾದಚಾರಿಯೋರ್ವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ದುರ್ಘಟನೆ ನಡೆದಿದೆ.

ಮೃತರನ್ನು ಕುಂಪಲ ಚೇತನನಗರ ನಿವಾಸಿ ಲೋಕೇಶ್ (48) ಎಂದು ಗುರುತಿಸಲಾಗಿದೆ. ಅವರು ತೊಕ್ಕೊಟ್ಟಿನಲ್ಲಿ ಇರುವ ವಾಣಿಜ್ಯ ಸಂಕೀರ್ಣವೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಆ.15 ರಂದು ಸಂಜೆ ಪಾಳಿ ಕೆಲಸಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾಪಿಕಾಡು ಎಂಬಲ್ಲಿ ಹೆದ್ದಾರಿ ದಾಟುತ್ತಿದ್ದಾಗ ಏಕಾಏಕಿ ಬೈಕ್ ಢಿಕ್ಕಿ ಹೊಡೆದು, ಅವರು ಗಂಭೀರ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿದ್ದಾರೆ. ಘಟನೆ ಬಗ್ಗೆ ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಮೃತ ಲೋಕೇಶ್ ಅವರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.