ಬಂಟ್ವಾಳ, ಆ. 08 (DaijiworldNews/AA): ಯಾವುದೇ ಕ್ರೀಡೆಗಳು ಕೇವಲ ಆಟವಲ್ಲ ಇದು ಒಗ್ಗಟ್ಟಿನಿಂದ ಆಡುವ ಒಂದು ಆರೋಗ್ಯಕರ ಸ್ಪರ್ಧೆಯಾಗಿದೆ. ಈ ಸ್ಪರ್ಧೆಗಳು ಕ್ರೀಡಾಮನೋಭಾವನೆಯನ್ನು ಬೆಳೆಸುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಸೌಹಾರ್ದತೆಯನ್ನು ಬೆಳೆಸಲು ಸಹಕಾರಿಯಾಗಿದೆ ಎಂದು ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಪದ್ಮನಾಭ ರೈ ಹೇಳಿದರು.


ಗುರುವಾರ ಕಲ್ಲಡ್ಕ ಮಾದರಿ ಶಾಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಬಂಟ್ವಾಳ ಹಾಗೂ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇದರ ಆಶ್ರಯದಲ್ಲಿ ಜರಗಿದ ಕಲ್ಲಡ್ಕ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕರ ಹಾಗೂ ಬಾಲಕಿಯರ ತ್ರೋಬಾಲ್ ಪಂದ್ಯಾಟ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಮಧುಸೂದನ್ ಐತಾಳ್ ವಹಿಸಿದ್ದರು.
ಶಾಲೆಯಲ್ಲಿ ಮಕ್ಕಳಿಗೆ ಪಾಠಗಳ ಜೊತೆ ಕ್ರೀಡೆ ಮುಖ್ಯ, ಮಕ್ಕಳಲ್ಲಿ ಸಕರಾತ್ಮಕ ಭಾವನೆಗಳನ್ನು ಬೆಳೆಸಲು ಮನಸ್ಸನ್ನು ಸದೃಢವಾಗಿಸಲು ಕ್ರೀಡೆಯು ಸಹಕಾರಿಯಾಗಿದೆ ಎಂದು ಗೋಳ್ತಮಜಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಜಯ ಶಂಕರ್ ಆಳ್ವ ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ಜಯಂತ್ ಮಕ್ಕಾರ್, ಸದಸ್ಯರಾದ ರಾಜೇಶ್ ಕೊಟ್ಟಾರಿ, ಲಕ್ಷ್ಮಿ ಗಣೇಶ್ ಹೋಟೆಲಿನ ಮಾಲಕರಾದ ರಾಜೇಂದ್ರ ಹೊಳ್ಳ, ಲಕ್ಷ್ಮಿ ನಿವಾಸ್ ಹೋಟೆಲ್ ಮಾಲಕರಾದ ಶಿವರಾಮ ಹೊಳ್ಳ, ಕಲ್ಲಡ್ಕ ಕ್ಲಸ್ಟರ್ ಸಿ ಆರ್ ಪಿ ಜ್ಯೋತಿ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯತಿನ್ ಕುಮಾರ್, ಶಾಲಾಭಿವೃದ್ಧಿ ಸಮಿತಿಯ ಸದಸ್ಯ ಸುರೇಶ್, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಇಂದುಶೇಖರ್, ಕ್ರೀಡಾಕೂಟದ ನೋಡಲ್ ದೈಹಿಕ ಶಿಕ್ಷಕ ಜಗದೀಶ್, ಗೋಳ್ತ ಮಜಲು ಪ್ರೌಢಶಾಲಾ ದೈಹಿಕ ಶಿಕ್ಷಕ ಪ್ರಕಾಶ್, ನಿವೃತ್ತ ದೈಹಿಕ ಶಿಕ್ಷಕ ಶಂಕರ್ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಪದವೀಧರ ಮುಖ್ಯ ಶಿಕ್ಷಕ ಅಬೂಬಕ್ಕರ್ ಅಶ್ರಫ್ ಸ್ವಾಗತಿಸಿ, ಶಿಕ್ಷಕಿ ತೇಜಾಕ್ಷಿ ದಿನೇಶ್ ವಂದಿಸಿದರು. ಶಿಕ್ಷಕಿ ಸ್ವಾತಿ ಜಗದೀಶ್ ರೈ ಕಾರ್ಯಕ್ರಮ ನಿರ್ವಹಿಸಿದರು.