ಉಡುಪಿ, ಆ. 03 (DaijiworldNews/AA): ರಾಷ್ಟ್ರೀಯ ಹೆದ್ದಾರಿ-66 ಸರ್ವಿಸ್ ರಸ್ತೆ ಮತ್ತು ಸಂಬಂಧಿತ ಮೂಲಸೌಕರ್ಯ ಯೋಜನೆಗಳ ಕುರಿತು ವಿವಿಧ ಅಭಿವೃದ್ಧಿ ಸಮಸ್ಯೆಗಳನ್ನು ಪರಿಹರಿಸಲು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅಧ್ಯಕ್ಷತೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಇಲಾಖಾ ಮಟ್ಟದ ಸಭೆ ನಡೆಯಿತು. ಈ ಸಭೆಯಲ್ಲಿ ಕುಂದಾಪುರ ಮತ್ತು ಹೆಜಮಾಡಿ ನಡುವಿನ 26 ಕಿಲೋಮೀಟರ್ ಅನುಮೋದಿತ ಸರ್ವಿಸ್ ರಸ್ತೆಯ ಕಾಮಗಾರಿಯನ್ನು ತಕ್ಷಣ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು.

ಸಂತೆಕಟ್ಟೆ ಮತ್ತು ಕಲ್ಯಾಣಪುರದಲ್ಲಿ ಅಂಡರ್ಪಾಸ್ ಅಭಿವೃದ್ಧಿ ಕುರಿತು ಮಾತನಾಡಿದ ಸಂಸದ ಕೋಟ, ರಸ್ತೆಯ ಒಂದು ಬದಿಯಲ್ಲಿ ಕಾಮಗಾರಿ ಅಪೂರ್ಣಗೊಂಡಿರುವುದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಾವೇದ್, ಅಂತರ್ಜಲ ಮಟ್ಟ ಹೆಚ್ಚಾಗಿರುವುದು ಮತ್ತು ಮುಂಗಾರು ಮಳೆಯಿಂದಾಗಿ ರಸ್ತೆ ಕಾಮಗಾರಿ ಪ್ರಾರಂಭಿಸಿದರೆ ಗುಣಮಟ್ಟಕ್ಕೆ ಧಕ್ಕೆಯಾಗುವ ಅಪಾಯವಿದೆ. ಹಾಗಾಗಿ, ಮಳೆಗಾಲ ಮುಗಿಯುವವರೆಗೆ ಮುಂದೂಡಬೇಕಾಗುತ್ತದೆ ಮನವಿ ಮಾಡಿದರು. ಆದರೆ, ಅಂತರ್ಜಲ ಮಟ್ಟ ಇಳಿದ ನಂತರ ಉಳಿದ ಭಾಗವನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸುವಂತೆ ಸಂಸದ ಕೋಟ ಸೂಚಿಸಿದರು.
ಅಂಬಲಪಾಡಿ ಫ್ಲೈಓವರ್ ಬಳಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವರದಿಗಳ ಬಗ್ಗೆ ಕೋಟ ಅವರು ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಗಳು, ಭಾರೀ ಮಳೆಯ ಸಮಯದಲ್ಲಿ ಚರಂಡಿ ನೀರು ರಸ್ತೆಗೆ ಹರಿದು ದೊಡ್ಡ ಹೊಂಡಗಳು ನಿರ್ಮಾಣವಾಗಿದ್ದವು. ಈಗ ವಾಹನ ಸಂಚಾರ ಸುಗಮಗೊಳಿಸಲು ಈ ಹೊಂಡಗಳನ್ನು ಇಂಟರ್ಲಾಕಿಂಗ್ ಟೈಲ್ಸ್ಗಳನ್ನು ಬಳಸಿ ತುಂಬಿಸಲಾಗಿದೆ. ಅಂಬಲಪಾಡಿ ಫ್ಲೈಓವರ್ ನಿರ್ಮಾಣವು ಮೇ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದರು.
ಕಟಪಾಡಿ ಅಂಡರ್ಪಾಸ್ ಯೋಜನೆಗೆ ಸಂಬಂಧಿಸಿದಂತೆ, ಅಕ್ಟೋಬರ್ನಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು. ಈ ಮಧ್ಯೆ ಸರ್ವೀಸ್ ರಸ್ತೆಯನ್ನು ಸುಸ್ಥಿತಿಯಲ್ಲಿಡಲು ಮತ್ತು ನಿರ್ಮಾಣ ಸಾಮಗ್ರಿಗಳನ್ನು ಮೊದಲೇ ಸಂಗ್ರಹಿಸಿಡುವಂತೆ ಸಂಸದ ಕೋಟ ತಿಳಿಸಿದರು. ಬ್ರಹ್ಮಾವರದ ಮಹೇಶ್ ಆಸ್ಪತ್ರೆಯಿಂದ ಧರ್ಮಾವರಂ ಆಡಿಟೋರಿಯಂವರೆಗೆ ಫ್ಲೈಓವರ್ ಮತ್ತು ಸಾಸ್ತಾನ ಗುರುನರಸಿಂಹ ದೇವಸ್ಥಾನದಿಂದ ಆಂಜನೇಯ ದೇವಸ್ಥಾನದವರೆಗೆ ಅಂಡರ್ಪಾಸ್ ನಿರ್ಮಾಣದ ಪ್ರಸ್ತಾವಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ದೇವಸ್ಥಾನದ ರಥದ ಮೆರವಣಿಗೆಗೆ ಅಡ್ಡಿಯಾಗದಂತೆ ಸಮಗ್ರ ವರದಿ ತಯಾರಿಸಿ ಅಂಡರ್ಪಾಸ್ ವಿನ್ಯಾಸಗೊಳಿಸುವಂತೆ ಸಂಸದರು ಸೂಚಿಸಿದರು.
ಎನ್ಹೆಚ್-66ರ ರಸ್ತೆ ಗುಂಡಿಗಳನ್ನು ಮಳೆಗಾಲದಲ್ಲಿ ಸರಿಪಡಿಸುವುದು, ಹೆಜಮಾಡಿಯಿಂದ ಕುಂದಾಪುರದವರೆಗಿನ ನಿಷ್ಕ್ರಿಯ ಬೀದಿ ದೀಪಗಳನ್ನು ದುರಸ್ತಿ ಮಾಡುವುದು ಮತ್ತು ಕುಂದಾಪುರ ಹಾಗೂ ಕೋಟ ಪ್ರದೇಶಗಳಲ್ಲಿ ಅಪಘಾತ ಪೀಡಿತ ವಲಯಗಳನ್ನು ಗುರುತಿಸಿ ಸೂಕ್ತ ನಿರ್ವಹಣೆ ಮಾಡುವುದು ಸೇರಿದಂತೆ ಇತರ ಪ್ರಮುಖ ವಿಷಯಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಇದಲ್ಲದೆ, ಸಾಸ್ತಾನ ಟೋಲ್ ಗೇಟ್ನಲ್ಲಿ ಪತ್ರಕರ್ತರಿಗೆ ಉಚಿತ ಪಾಸ್ ನೀಡುವಂತೆ ಸಂಸದ ಕೋಟ ಈ ಹಿಂದೆ ನೀಡಿದ್ದ ನಿರ್ದೇಶನವನ್ನು ಪುನರುಚ್ಚರಿಸಿದರು.
ಸಭೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಟಿ.ಕೆ. ಸ್ವರೂಪ, ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಶ್ಮಿ, ಎನ್ಹೆಚ್ಎಐ ಯೋಜನಾ ನಿರ್ದೇಶಕ ಜಾವೇದ್, ಇಂಜಿನಿಯರ್ಗಳು ಮತ್ತು ಸಂಬಂಧಿತ ಅಭಿವೃದ್ಧಿ ಕಾರ್ಯಗಳ ಗುತ್ತಿಗೆದಾರರು ಉಪಸ್ಥಿತರಿದ್ದರು.