ಬೆಳ್ತಂಗಡಿ, ಆ. 03 (DaijiworldNews/AA): ಧರ್ಮಸ್ಥಳದ ಸಮೀಪದ ಅರಣ್ಯ ಮತ್ತು ನೇತ್ರಾವತಿ ಸ್ನಾನಘಟ್ಟದ ಪ್ರದೇಶದಲ್ಲಿ ಅನಾಮಿಕ ಗುರುತಿಸಿದ ಸ್ಥಳದಲ್ಲಿ ವಿಶೇಷ ತನಿಖಾ ದಳ (ಎಸ್ಐಟಿ) ನಡೆಸಿದ ಐದನೇ ದಿನದ ತೀವ್ರ ಶೋಧ ಕಾರ್ಯಾಚರಣೆಯ ನಂತರವೂ ಯಾವುದೇ ಕಳೇಬರ ಪತ್ತೆಯಾಗಿಲ್ಲ.


ಐದನೇ ದಿನದ ಶೋಧ ಕಾರ್ಯಾಚರಣೆಯು ಶನಿವಾರ ಮುಕ್ತಾಯವಾಗಿದ್ದು, ಅನಾಮಿಕ ಗುರುತಿಸಿದ ಒಂಬತ್ತು ಮತ್ತು ಹತ್ತನೇ ಸ್ಥಳಗಳಲ್ಲಿ ಎಷ್ಟೇ ಅಗೆದರೂ ಯಾವುದೇ ಕಳೇಬರ ಪತ್ತೆಯಾಗಿಲ್ಲ.
ಶನಿವಾರ ಮಧ್ಯಾಹ್ನ 12 ರಿಂದ 2.30 ರವರೆಗೆ ಎಸ್ಐಟಿ ಅಧಿಕಾರಿಗಳು ಅನಾಮಿಕನೊಂದಿಗೆ ಶವಗಳನ್ನು ಹೂತು ಹಾಕಿರುವ ಶಂಕಿತ ಸ್ಥಳವಾದ ನೇತ್ರಾವತಿ ಅರಣ್ಯ ಪ್ರದೇಶಕ್ಕೆ ಆಗಮಿಸಿದರು. ಸ್ಥಳೀಯ ಕಾರ್ಮಿಕರು ನಾಲ್ಕು ಅಡಿಗಳವರೆಗೆ ಅಗೆದ ನಂತರ, ಯಂತ್ರ ಬಳಸಿ ಮಿನಿ ಜೆಸಿಬಿ ಮೂಲಕ ಮತ್ತಷ್ಟು ಆಳವಾಗಿ ಅಗೆದರು. ಆದರೂ ಈ ಸ್ಥಳದಲ್ಲಿ ಯಾವುದೇ ಕಳೇಬರ ಪತ್ತೆಯಾಗಲಿಲ್ಲ.
ಬಳಿಕ ಮಧ್ಯಾಹ್ನ 3.30ರ ನಂತರ ೧೦ನೇ ಸ್ಥಳದಲ್ಲಿ ಕಾರ್ಯಾಚರಣೆ ಆರಂಭಿಸಲಾಯಿತು. ಆದರೆ ಸಂಜೆ 4.30ರ ಸುಮಾರಿಗೆ ಭಾರಿ ಮಳೆ ಸುರಿಯಲು ಪ್ರಾರಂಭಿಸಿದ್ದರಿಂದ, ಶೋಧ ಕಾರ್ಯಕ್ಕೆ ಅಡ್ಡಿಯುಂಟಾಯಿತು. ಹೀಗಾಗಿ ಸಂಜೆ 5.30ಕ್ಕೆ 10ನೇ ಪ್ರದೇಶದಲ್ಲಿ ನಡೆಯುತ್ತಿದ್ದ ಕಾರ್ಯಾಚರಣೆಯನ್ನು ಅರ್ಧಕ್ಕೆ ನಿಲ್ಲಿಸಲಾಯಿತು.
ಅನಾಮಿಕ ಗುರುತಿಸಿದ ಸ್ಥಳಗಳ ಆಧಾರದ ಮೇಲೆ ತನಿಖೆ ನಡೆಯುತ್ತಿರುವ ಕಾರಣ, ಅವರನ್ನು ಮತ್ತಷ್ಟು ವಿಚಾರಣೆಗಾಗಿ ಎಸ್ಐಟಿ ಕಚೇರಿಗೆ ಕರೆತರಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.