ಬಂಟ್ವಾಳ, ಆ. 03 (DaijiworldNews/AA): ಧಾರ್ಮಿಕ ಕೇಂದ್ರದ ಕಾಣಿಕೆ ಹುಂಡಿಯನ್ನು ಒಡೆದು ಹಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಯುವಕರನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ವಿಟ್ಲ ಕಸಬಾ ಗ್ರಾಮದ ನಿವಾಸಿಗಳಾದ ತ್ವಾಹಿದ್ (19), ಉಮ್ಮರ್ ಫಾರೂಕ್ (18) ಮತ್ತು ಮೊಹಮ್ಮದ್ ನಬೀಲ್ (18) ಬಂಧಿತ ಆರೋಪಿಗಳು.
ಜುಲೈ ೨೬ರಂದು ದೇಲಂತಬೆಟ್ಟು ನಿವಾಸಿ ಹಾಗೂ ಸ್ಥಳೀಯ ಧಾರ್ಮಿಕ ಕೇಂದ್ರದ ಅಧ್ಯಕ್ಷರಾದ ಡಿ. ನಾರಾಯಣ ರಾವ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ.
ದೇಲಂತಬೆಟ್ಟು ಶಾಲೆಯ ಪಕ್ಕದ ರಸ್ತೆಯ ಬದಿಯಲ್ಲಿ ಮತ್ತು ದೇಲಂತಬೆಟ್ಟು ಚರ್ಚಿನ ಕೆಳಗಿನ ರಸ್ತೆಯ ಬದಿಯಲ್ಲಿ ಇರಿಸಲಾಗಿದ್ದ ಹುಂಡಿಯನ್ನು ಒಡೆಯಲಾಗಿದೆ. ಹುಂಡಿಯಲ್ಲಿ ಸಂಗ್ರಹವಾಗಿದ್ದ ಸುಮಾರು 12,000 ದಿಂದ 15,000 ರೂಪಾಯಿಗಳನ್ನು ಕಳವು ಮಾಡಲಾಗಿದೆ ಎಂದು ನಾರಾಯಣ ಅವರು ದೂರು ನೀಡಿದ್ದಾರೆ. ದೂರಿನ ಹಿನ್ನೆಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.