ಬಂಟ್ವಾಳ,ಆ. 02 (DaijiworldNews/AK): ತಾಂತ್ರಿಕ ದೋಷದಿಂದ ನಿಯಂತ್ರಣ ತಪ್ಪಿ ಖಾಸಗಿ ಬಸ್ಸೊಂದು ಆವರಣ ಗೋಡೆಗೆ ಡಿಕ್ಕಿಯಾಗಿ ಪ್ರಯಾಣಿಕರು ಗಾಯಗೊಂಡ ಘಟನೆ ವಿಟ್ಲದಲ್ಲಿ ನಡೆದಿದೆ. ವಿಟ್ಲ ಕೆ.ಎಸ್.ಆರ್.ಟಿ.ಸಿ.ನಿಲ್ದಾಣದ ಬಳಿ ಖಾಸಗಿ ಬಸ್ಸಿನ ಬ್ರೇಕ್ ವೈಫಲ್ಯದಿಂದ ರಸ್ತೆ ಬದಿಯ ಆವರಣ ಗೋಡೆಗೆ ಢಿಕ್ಕಿಯಾದ ಘಟನೆ ಶನಿವಾರ ಸಂಜೆ ವೇಳೆ ನಡೆದಿದೆ.

ಅಪಘಾತದಲ್ಲಿ ಆವರಣ ಗೋಡೆ ಕುಸಿದುಬಿದ್ದಿದ್ದು, ಬಸ್ ಮುಂಭಾಗ ನಜ್ಜುಗುಜ್ಜಾಗಿದೆ. ಸುಮಾರು 17 ಕ್ಕೂ ಅಧಿಕ ಪ್ರಯಾಣಿಕರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ವಿಟ್ಲದಿಂದ ಕನ್ಯಾನಕ್ಕೆ ಬಸ್ ತೆರಳುವ ಸಂದರ್ಭ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ವಿಟ್ಲ ಎಸ್.ಐ.ರಾಮಕೃಷ್ಣ ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.