ಬಂಟ್ವಾಳ, ಆ. 01 (DaijiworldNews/AA): ಕಳೆದ 4 ದಿನಗಳ ಹಿಂದೆ ನಾಪತ್ತೆಯಾಗಿದ್ದ ಕಡೇಶಿವಾಲಯ ನಿವಾಸಿ ಹೇಮಂತ್ ಆಚಾರ್ಯ(21)ಎಂಬಾತನ ಮೃತದೇಹವು ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.

ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬಜಾಲ್ ಮುಗೇರು ಬಳಿ ನೇತ್ರಾವತಿ ನದಿಯ ಮಧ್ಯದಲ್ಲಿ ಅವರ ದೇಹ ತೇಲುತ್ತಿರುವುದು ಪತ್ತೆಯಾಗಿದೆ.
ಜು 27 ರಂದು ಹೇಮಂತ್ ನಾಪತ್ತೆಯಾಗಿದ್ದು, ಈ ಕುರಿತಾಗಿ ಜು.28 ರಂದು ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿತ್ತು. ಜು.29 ರಂದು ಹೇಮಂತ್ ನ ದ್ವಿಚಕ್ರ ವಾಹನ ಜಕ್ರಿಬೆಟ್ಟುವಿನಲ್ಲಿ ಪತ್ತೆಯಾಗಿದ್ದು, ಅದರಲ್ಲಿ ಮೊಬೈಲ್ ಬಿಟ್ಟು ಹೋಗಿದ್ದಾನೆ ಎಂದು ತಿಳಿದುಬಂದಿದೆ.
ನೇತ್ರಾವತಿ ನದಿಯ ಬದಿಯಲ್ಲಿ ವಾಹನ ಇಟ್ಟು ನಾಪತ್ತೆಯಾಗಿದ್ದ ಹಿನ್ನೆಲೆ ಜು.29ರಂದು ಸ್ಥಳೀಯ ಮುಳುಗು ತಜ್ಞ ನಿಸಾರ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ನಗರ, ಗ್ರಾಮಾಂತರ ಪೊಲೀಸರ ತಂಡ ಹುಡುಕಾಟ ನಡೆಸಿದೆ. ಜು.30ರಂದು ಅಗ್ನಿಶಾಮಕದಳ ಶೋಧಕಾರ್ಯ ನಡೆಸಿದ್ದು, ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ.
ಜು. 31ರಂದು ಕಡೇಶಿವಾಲಯ ಗ್ರಾಮ ಪಂಚಾಯತ್ ಸದಸ್ಯರಾದ ಸಂಪತ್ ಸುವರ್ಣ ಹಾಗೂ ಈಶ್ವರ್ ಮಲ್ಪೆ ನೇತೃತ್ವದ ಹೆಚ್ಚುವರಿ ತಂಡಗಳು, ಎನ್ಡಿಆರ್ಎಫ್ ಮತ್ತು ಸ್ಥಳೀಯ ಈಜುಗಾರ ನಿಸಾರ್ ಅವರನ್ನು ಒಳಗೊಂಡ ತಂಡ ಹೇಮಂತ್ಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದು, ಆರಂಭದಲ್ಲಿ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ.
ನಂತರ ಮಧ್ಯಾಹ್ನ, ಮೂರು ವಿಭಿನ್ನ ತಂಡಗಳಿಂದ ತುಂಬೆ ಡ್ಯಾಂನಿಂದ ಕೆಳಕ್ಕೆ ಡ್ರೋನ್ ಸಹಾಯದಿಂದ ಶೋಧ ಕಾರ್ಯಾಚರಣೆ ನಡೆಸಲಾಯಿತು. ಸಂಜೆಯ ಹೊತ್ತಿಗೆ, ಡ್ರೋನ್ ನದಿಯಲ್ಲಿ ತೇಲುತ್ತಿರುವ ದೇಹವನ್ನು ಪತ್ತೆ ಮಾಡಿದೆ. ನಂತರ ಶೋಧ ತಂಡವು ಯಶಸ್ವಿಯಾಗಿ ಹೇಮಂತ್ ಅವರ ದೇಹವನ್ನು ನೀರಿನಿಂದ ಹೊರತೆಗೆದಿದೆ ಎಂದು ತಿಳಿದುಬಂದಿದೆ.