ಕಾಸರಗೋಡು, ಜು. 31 (DaijiworldNews/AA): ಅಕ್ರಮ ಮರಳು ಸಾಗಾಟ ಕಾರ್ಯಾಚರಣೆಯ ಬಗ್ಗೆ ಮಾಹಿತಿ ಸೋರಿಕೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಕುಂಬಳೆ ಠಾಣೆಯ ಆರು ಪೊಲೀಸರನ್ನು ಅಮಾನತುಗೊಳಿಸಿ ಆದೇಶ ನೀಡಲಾಗಿದೆ. ಮರಳು ಮಾಫಿಯಾ ಜೊತೆ ಸಂಪರ್ಕ ಇರಿಸಿದ್ದ ಈ ಪೊಲೀಸರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಭರತ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.

ಪೊಲೀಸ್ ಕಾನ್ಸ್ ಟೇಬಲ್ ಪಿ. ಎಂ.ಅಬ್ದುಲ್ ಸಲಾಂ, ವಿನೋದ್ ಕುಮಾರ್, ಲಿನೀಷ್, ಕೆ. ಅನೂಪ್, ಮನು, ಪೊಲೀಸ್ ವಾಹನ ಚಾಲಕ ಕೃಷ್ಣ ಪ್ರಸಾದ್ ಮೊದಲಾದವರನ್ನು ಅಮಾನತು ಗೊಳಿಸಲಾಗಿದೆ.
ಅಕ್ರಮ ಮರಳು ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಟಿಪ್ಪರ್ ಸಹಿತ ಚಾಲಕನನ್ನು ಬಂಧಿಸಲಾಗಿತ್ತು. ಈತನ ಮೊಬೈಲ್ ನ್ನು ಪರಿಶೀಲಿಸಿದಾಗ ಪೊಲೀಸರ ಜೊತೆಗಿನ ನಂಟು, ಸಂದೇಶ ರವಾನೆ, ಕರೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಪೊಲೀಸರು ದಾಳಿ ನಡೆಸುವ ಮೊದಲೇ ಮರಳು ಮಾಫಿಯಾಕ್ಕೆ ಕೆಲ ಪೊಲೀಸರು ಮಾಹಿತಿ ನೀಡುತ್ತಿದ್ದು, ಇದಕ್ಕೆ ಪ್ರತಿಫಲವಾಗಿ ಮರಳು ಮಾಫಿಯಾದಿಂದ ಲಂಚ ಪಡೆಯುತ್ತಿದ್ದರೆಂದು ಮಾಹಿತಿ ಲಭಿಸಿತ್ತು.
ಈ ಬಗ್ಗೆ ಕುಂಬಳೆ ಪೊಲೀಸ್ ಠಾಣಾಧಿಕಾರಿ ಶ್ರೀಜಿತ್ ನೀಡಿದ ದೂರಿನಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರು ಮಂದಿ ಪೊಲೀಸರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.