ಮಂಗಳೂರು, ಜು. 15 (DaijiworldNews/AK): ಡಿಸಿಎಂ ಡಿಕೆಶಿಯವರು ಮಂಗಳೂರು ರಾತ್ರಿ 7ರ ನಂತರ ಪ್ರಯೋಜನಕ್ಕೆ ಬಾರದ ಊರು ಅಂದಿದ್ದರು, ಇದೀಗ ಮರಳು, ಕೆಂಪುಕಲ್ಲನ್ನು ಬಂದ ಮಾಡುವ ಮುಖೇನ ಬೆಳಗ್ಗಿನಿಂದಲೇ ಪ್ರಯೋಜನಕ್ಕೆ ಬಾರದ ಊರಿನಂತೆ ಮಾಡಿದ್ದಾರೆ. ರಾಜ್ಯದ ಕಾಂಗ್ರೆಸ್ ಸರಕಾರ ದ.ಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪೂರ್ಣವಾಗಿ ನಿಷ್ಪ್ರಯೋಜಕನ್ನಾಗಿ ಮಾಡಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಆರೋಪಿಸಿದರು.

ತೊಕ್ಕೊಟ್ಟು ಸಮೀಪದ ಕೊಲ್ಯ ಸಮೀಪ ಖಾಸಗಿ ಸಮಾರಂಭದಲ್ಲಿ ಭಾಗವಹಿಸಿ ಮಾಧ್ಯಮಗಳ ಜತೆಗೆ ಮಾತನಾಡಿದ ಅವರು, ಕಾರ್ಮಿಕರ ಉದ್ಯಮ, ಕೆಲಸಗಳನ್ನು ಹತ್ತಿಕ್ಕುವ ಮೂಲಕ ಭಾವನೆಗಳಿಗೆ ಘಾಸಿಗೊಳಿಸವುದರ ಜೊತೆಗೆ ಹೊಟ್ಟೆಗೆ ಊಟವಿಲ್ಲದಂತೆ ರಾಜ್ಯ ಕಾಂಗ್ರೆಸ್ ಸರಕಾರ ಮಾಡಿದೆ. ರಾತ್ರಿ 7ರ ನಂತರ ಮಂಗಳೂರು ಪ್ರಯೋಜನಕ್ಕಿಲ್ಲದ ಊರು ಎಂದು ಡಿಕೆಶಿ ಬೆಂಗಳೂರಿನಲ್ಲಿ ಹೇಳಿದ್ದು, ಇದೀಗ ಬೆಳಗ್ಗಿನಿಂದಲೇ ಪ್ರಯೋಜನವಿಲ್ಲದಂತೆ ಮಾಡಲಾಗಿದೆ ಎಂದರು.
ದೈವಸ್ಥಾನ, ದೇವಸ್ಥಾನ, ಗೃಹನಿರ್ಮಾಣ ಕಟ್ಟಡ ನಿರ್ಮಾಣ ಎಲ್ಲದರ ಕಾಮಗಾರಿಗಳು ಕೆಂಪುಕಲ್ಲು ಕೊರತೆಯಿಂದಾಗಿ ನಿಂತುಹೋಗಿದೆ. ಕೇರಳದಲ್ಲಿ 1 ಟನ್ ಕಲ್ಲಿಗೆ ರೂ.32 ರಾಜಧನ ಪಡೆದರೆ, ಕರ್ನಾಟಕದಲ್ಲಿ ರೂ. 282 ರಾಜಧನ ಪಡೆಯಲಾಗುತ್ತಿದೆ. ಅಕ್ರಮ ಕಲ್ಲುಕೋರೆಗಳ ನಡುವೆ ಕಾನೂನುಪ್ರಕಾರ ತೆಗೆಯುವವರು ಅಷ್ಟೊಂದು ಮೊತ್ತ ರಾಜಧನ ನೀಡುವುದಾದರೂ ಹೇಗೆ?. 21 ದಿನಗಳಲ್ಲಿ ಪರವಾನಿಗೆ ನೀಡಬೇಕಾಗಿತ್ತು. ಆದರೆ 7-8 ತಿಂಗಳು ಕಳೆದರೂ ಕೊಡದೇ ಜಿಲ್ಲೆಯ ಇಡೀ ಕಾರ್ಮಿಕ ವರ್ಗವನ್ನು ಬೀದಿಗೆ ತಳ್ಳಿ, ಹೊತ್ತಿನ ಊಟಕ್ಕೆ ತತ್ವಾರ ಉಂಟಾಗುವಂತೆ ಮಾಡಿದೆ. ಮೈನ್ಸ್ ಆಂಡ್ ಝೂವಲಾಜಿ , ರಾಜಧನ ಕಟ್ಟದೇ ಅನುಮತಿ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದೆ.
ಮೊದಲಿಗೆ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಲಿ. ಕಾಂಗ್ರೆಸ್ ಜನಪ್ರತಿನಿಧಿಗಳ ಬೆನ್ನಲ್ಲಿ ನಿಲ್ಲುವವರೇ ಅಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅದರ ವಿರುದ್ಧ ಕ್ರಮವಹಿಸದ ಇಲಾಖೆಗಳು ರಾಜಧನ ಸಂಗ್ರಹಕ್ಕೆ ಮುಂದಾಗಿರುವುದು ನ್ಯಾಯಸಮ್ಮತವಲ್ಲ. ಬಿಜೆಪಿ ಸರಕಾರವಿದ್ದಾಗ ಇಂತಹ ವಾತಾವರಣವೇ ನಿರ್ಮಾಣವಾಗಿಲ್ಲ. ವಾರದೊಳಕ್ಕೆ ಸರಿಪಡಿಸುವ ಭರವಸೆಯನ್ನು ರಾಜ್ಯ ಸರಕಾರ ನೀಡಿದೆ. ಸರಿಯಾಗದೇ ಇದ್ದಲ್ಲಿ ಇಂದು ಜಿಲ್ಲೆಯಾದ್ಯಂತ ನಡೆದ ಪ್ರತಿಭಟನೆಯ ರೀತಿಯಲ್ಲೇ ಮತ್ತೊಂದು ಜನಾಂದೋಲನ ಅನಿವಾರ್ಯ. ಗಲಭೆ ನಿಯಂತ್ರಿಸುವಲ್ಲಿ ರಾಜ್ಯ ಸರಕಾರ ವಿಫಲಗೊಂಡಿದೆ. ಗಾಯಕ್ಕೆ ಅಂದೇ ಔಷಧಿ ಸಿಂಪಡಣೆ ಮಾಡಬೇಕಾಗಿತ್ತು. ಅದರ ಬದಲು ಎಲ್ಲಾ ಮುಗಿದ ಮೇಲೆ ಶಾಂತಿ ಸಭೆ ನಡೆಸಿ ತಮ್ಮ ವೈಫಲ್ಯಗಳನ್ನು ಮರೆಮಾಚುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.