ಮಂಗಳೂರು, ಜು. 14 (DaijiworldNews/TA): ಕಾದಂಬರಿ ಎನ್ನುವುದು ಚರಿತ್ರೆ ಅಲ್ಲ. ಆದರೆ ಚರಿತ್ರೆಯನ್ನು ಹೇಳುವ ಕಾರ್ಯವನ್ನು ಮಾಡುತ್ತದೆ. ಚರಿತ್ರೆ ದಾಖಲೆಗಳನ್ನು ಬಯಸುತ್ತದೆ. ಕಾದಂಬರಿಯಲ್ಲಿ ಚರಿತ್ರೆಯ ಜತೆಯಲ್ಲಿ ವಿಶ್ಲೇಷಣೆಗೂ ಅವಕಾಶ ಇರುತ್ತದೆ ಎಂದು ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಎಕ್ಕಾರ್ ಹೇಳಿದರು. ಅವರು ಭಾನುವಾರ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಸಂದೇಶ ಸಭಾಂಗಣದಲ್ಲಿ ಕನ್ನಡದ ಲಿಪಿ ಕೊಂಕಣಿಯ ಮೊದಲ ಕಾದಂಬರಿ ಆಂಜೆಲ್-75 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.


















ಯಾವುದೇ ಭಾಷೆಯ ಸಾಹಿತ್ಯದ ತಿಳುವಳಿಕೆ ಇದ್ದಾಗ ಅದರ ಆಳವಾದ ಅಧ್ಯಯನ ಮಾಡಿದಾಗ ಸಾಹಿತ್ಯದ ಮೇಲೆ ಪ್ರೀತಿ ಮೂಡುತ್ತದೆ. ಕನ್ನಡ ಲಿಪಿಯಲ್ಲಿ ಬಂದ ಕೊಂಕಣಿಯ ಮೊದಲ ಕೃತಿ ಆಂಜೆಲ್ ಕೃತಿ ಐತಿಹಾಸಿಕವಾಗಿ ಕೂಡ ಒಂದು ಮೈಲಿಗಲ್ಲು. ಇಂದಿನ ಯುವ ಪೀಳಿಗೆ ಸಾಹಿತ್ಯ ರಚನೆಯಲ್ಲಿ ಇಂತಹ ಕೃತಿಗಳು ಕಾರ್ಯಕ್ರಮಗಳು ಪ್ರೇರಣೆಯನ್ನು ನೀಡುತ್ತದೆ. ಮುಂದಿನ ಜನಾಂಗಕ್ಕೂ ಸಾಹಿತ್ಯ ವಿಸ್ತರಣೆಗೂ ದಾರಿ ಮಾಡಿಕೊಡುತ್ತದೆ ಎಂದರು.
ಆಂಜೆಲ್ ಕಾದಂಬರಿ ಪ್ರಕಟಗೊಂಡು 75 ವರ್ಷ ಸಂದಿದೆ. ಇಂದಿನ ವಿದ್ಯಾರ್ಥಿ, ಯುವಜನತೆಗೆ ಸಾಹಿತ್ಯ ರಚನೆಯ ಕುರಿತು ತರಬೇತಿಗಳು ನಡೆಯಬೇಕು. ಈ ಮೂಲಕ ಕೊಂಕಣಿ ಭಾಷೆಯ ಸಾಹಿತ್ಯ ಬೆಳವಣಿಗೆ ಹೊಂದುತ್ತದೆ. ಈ ಕುರಿತು ತರಬೇತಿ ಸಿಕ್ಕಾಗ ಯುವಜನಾಂಗಕ್ಕೆ ಪ್ರೇರಣೆ, ಸಾಹಿತ್ಯದ ಒಲವು ಬೆಳೆಸುವ ನಿಟ್ಟಿನಲ್ಲಿ ಅಕಾಡೆಮಿ ಕೂಡ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದರು.
ಆಂಜೆಲ್ ಕಾಂದಬರಿಯ ಇ-ಬುಕ್ವನ್ನು ಬಿಡುಗಡೆ ಮಾಡಿ ಕೊಂಕಣಿ ನಾಟಕ ಸಭೆಯ ಅಧ್ಯಕ್ಷ ಫಾ.ರೊಕಿ ಡಿಕುನ್ಹಾ ಮಾತನಾಡಿ, ಆಂಜೆಲ್ ಕಾದಂಬರಿ ಬರೆದ ದಿ.ಜೊ.ಸಾ. ಅಲ್ವಾರೀಸ್ ಅವರು ವಿಶೇಷ ಪ್ರತಿಭೆಯನ್ನು ಹೊಂದಿದವರು ಕೊಂಕಣಿ ಸಾಹಿತ್ಯವನ್ನು ಶ್ರೀಮಂತಗೊಳಿಸುವ ಕಾರ್ಯದಲ್ಲಿ ಅವರ ಹೆಸರು ಚಿರಪರಿಚಿತವಾಗಿದ್ದು ಯುವಜನತೆಗೆ ಅವರು ಪ್ರೇರಣಾಶಕ್ತಿಯಾಗಿದ್ದಾರೆ ಎಂದರು. ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟಾನಿ ಆಲ್ವಾರಿಸ್ ವಹಿಸಿದ್ದರು. ದಿ.ಜೊ.ಸಾ. ಆಲ್ವಾರಿಸ್ ಅವರ ಧರ್ಮಪತ್ನಿ ಮೋನಿಕಾ ಆಲ್ವಾರಿಸ್ ಉಪಸ್ಥಿತರಿದ್ದರು. ಸ್ವಪ್ನಾ ಮೇ ಕ್ರಾಸ್ತಾ ಪ್ರಸ್ತಾವಿಕವಾಗಿ ಮಾತನಾಡಿದರು. ರಿಚರ್ಡ್ ಅಲ್ವಾರೀಸ್ ಕುಲಶೇಖರ ದಿ.ಜೊ.ಸಾ. ಆಲ್ವಾರಿಸ್ ಅವರ ಕುರಿತು ಮಾತನಾಡಿದರು. ಡಾ.ಡಿಂಪಲ್ ಫರ್ನಾಂಡೀಸ್ ಪುತ್ತೂರು ಆಂಜೆಲ್ ಕಾದಂಬರಿಯ ಕುರಿತು ಮಾತನಾಡಿದರು. ಆಂಜೆಲ್ ಕೃತಿಯನ್ನು ಇ-ಬುಕ್ಗೆ ಪರಿವರ್ತಿಸಿದ ಕ್ಯಾರನ್ ಇ-ಬುಕ್ನ ಅನಿವಾರ್ಯತೆಯ ಕುರಿತು ಮಾತನಾಡಿದರು. ವಿತೋರಿ ಕಾರ್ಕಳ ಅವರು ಕಾರ್ಯಕ್ರಮ ನಿರೂಪಿಸಿದರು.