ಉಡುಪಿ, ಜು. 13 (DaijiworldNews/TA): ಕಾಪು ತಾಲೂಕಿನ ಹೊಸ ಮಾರಿಗುಡಿಗೆ ಧಾರ್ಮಿಕ ದತ್ತಿ ಇಲಾಖೆ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿದರು. ಇತಿಹಾಸ ಪ್ರಸಿದ್ಧ ಹೊಸ ಮಾರಿಗುಡಿ ಸಂಪೂರ್ಣ ಜೀರ್ಣೋದ್ಧಾರ ವಾಗಿದ್ದು ಅಪರೂಪದ ಇಳಕಲ್ ಕಲ್ಲಿನ ದೇವಸ್ಥಾನ ಎಲ್ಲರನ್ನು ಸೆಳೆಯುತ್ತಿದೆ. ರಾಜಕಾರಣಿಗಳು ಸಿನಿಮಾ ನಟರು ಉದ್ಯಮಿಗಳು ಕ್ರೀಡಾ ಕ್ಷೇತ್ರದ ಸಾಧಕರು ಸೇರಿದಂತೆ ಸಾವಿರಾರು ಜನ ಭಕ್ತರು ದೇಗುಲಕ್ಕೆ ಭೇಟಿ ಕೊಡುತ್ತಿದ್ದಾರೆ.

ಸಾರ್ವಜನಿಕ ದೇಣಿಗೆಯಿಂದ ನಿರ್ಮಾಣವಾದ ಅದ್ಭುತ ದೇವಸ್ಥಾನದ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದರು. ವಿಶೇಷ ಪೂಜೆ ಮಾಡಿ ಸಚಿವರಿಗೆ ಪ್ರಸಾದವನ್ನು ನೀಡಿ ಗೌರವಿಸಲಾಯಿತು. ಕ್ಷೇತ್ರದ ವಿಶೇಷ ಸೇವೆಗಳು ಮುಂದಿನ ದಿನದಲ್ಲಿ ನಡೆಯಬೇಕಾದ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಸಚಿವರಿಗೆ ಮಾಹಿತಿ ನೀಡಿದರು.
ಭಕ್ತರಿಗೆ ಮತ್ತು ಸಾರ್ವಜನಿಕರಿಗೆ ಉಪಕಾರಿಯಾಗುವ ಸಾಕಷ್ಟು ಯೋಜನೆಗಳಿಗೆ ಸರ್ಕಾರದ ಅನುದಾನದ ಅವಶ್ಯಕತೆ ಇದೆ ಎಂದು ಈ ಸಂದರ್ಭದಲ್ಲಿ ಬೇಡಿಕೆ ಇಡಲಾಯಿತು. ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಮತ್ತಿತರ ಅಧಿಕಾರಿಗಳು ಜನಪ್ರತಿನಿಧಿಗಳು ಜೊತೆಗಿದ್ದರು.