ಬಂಟ್ವಾಳ, ಜು. 13 (DaijiworldNews/AK):ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದನ್ವಯ ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿ ಆಶ್ರಯದಲ್ಲಿ ಬಂಟ್ವಾಳ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ಒಟ್ಟು 11530 ಪ್ರಕರಣಗಳು ಇತ್ಯರ್ಥಗೊಂಡಿದ್ದು, ದಂಡ ಸೇರಿದಂತೆ 4,25,33,790 ರೂ.ಮೊತ್ತವನ್ನು ವಸೂಲಾಗಿದೆ ಎಂದು ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿಯ ಪ್ರಕಟಣೆ ತಿಳಿಸಿದೆ.

ಸಿವಿಲ್ ದಾವೆಯಲ್ಲಿ 26 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಇದರಲ್ಲಿ ಬ್ಯಾಂಕ್ ವಸೂಲಾತಿ ಪ್ರಕರಣಗಳು, ವಿವಿಧ ಶುಲ್ಕ ಪ್ರಕರಣಗಳಿಗೆ ಸಂಬಂಧಿಸಿ 66,06,143 ರೂ.ಮೊತ್ತ ವಸೂಲಾಗಿದೆ. 908 ಕ್ರಿಮಿನಲ್ ಪ್ರಕರಣಗಳು ಇತ್ಯರ್ಥಗೊಂಡು, ಪ್ರಕರಣಗಳು, ಎಂಎಂಆರ್ಡಿ ಪ್ರಕರಣಗಳು, ಚೆಕ್ ಮೋಟಾರು ವಾಹನ ಬೌನ್ಸ್ ಪ್ರಕರಣಗಳು ಸೇರಿದಂತೆ 73,92,849 ರೂ.ಮೊತ್ತ ವಸೂಲಾಗಿದೆ. ಅದೇರೀತಿ ವ್ಯಾಜ್ಯ ಪೂರ್ವ ಪ್ರಕರಣಗಳಿಗೆ ಸಂಬಂಧಿಸಿ 10,596 ಕೇಸುಗಳು ಇತ್ಯರ್ಥವಾಗಿದ್ದು ,2,85,34,798 ರೂ.ಮೊತ್ತವನ್ನು ವಸೂಲು ಮಾಡಲಾಗಿದೆ ಎಂದು ಸಮಿತಿ ತಿಳಿಸಿದೆ.
ಈ ಅದಾಲತ್ನಲ್ಲಿ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದಾದ ಆಸ್ತಿ ವಿವಾದಗಳು, ವಿಭಾಗ ಮೊಕದ್ದಮೆಗಳು, ಹಣ ವಸೂಲಿ ಪ್ರಕರಣಗಳು, ನಿರ್ಧಿಷ್ಟ ಪರಿಹಾರ ಕಾಯ್ದೆಯಡಿಯಲ್ಲಿ ದಾಖಲಾದ ಮೊಕದ್ದಮೆಗಳು, ಮೋಟಾರು ವಾಹನ, ಎಂಎಂಆಡಿ, ಬ್ಯಾಂಕ್ ವಸೂಲಾತಿ, ವಿವಾಹ ಸಮನ್ವಯ, ಚೆಕ್ ಬೌನ್ಸ್ ಪ್ರಕರಣಗಳು ಮತ್ತು ಇತರ ರಾಜಿಯೋಗ್ಯ ಕ್ರಿಮಿನಲ್ ಪ್ರಕರಣಗಳು ಸೇರಿದಂತೆ ಸಿವಿಲ್ ಮತ್ತು ಕ್ರಿಮಿನಲ್ ವಿವಾದಗಳನ್ನು ಪರಿಹರಿಸಿಕೊಳ್ಳಲಾಯಿತು.