ಉಳ್ಳಾಲ, ಜು. 08 (DaijiworldNews/TA): ಅಪ್ರಾಪ್ತ ವಯಸ್ಸಿನ ಬಾಲಕಿಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ದೇರಳಕಟ್ಟೆ ಸಮೀಪದ ರೆಂಜಾಡಿ ನಿವಾಸಿ ಮಹಮ್ಮದ್ ಶಹಬಾಝ್ (27) ಮತ್ತು ಆಕೆಯನ್ನು ಅಪಹರಿಸಲು ಸಹಕರಿಸಿದ ಕೊಣಾಜೆ ನಿವಾಸಿಗಳಾದ ಅಮೀರ್ ಸೊಹೈಲ್, ನಿಶಾ ದಂಪತಿಯನ್ನು ಪೊಲೀಸರು ಬಂಧಿಸಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪತ್ತೆ ಹಚ್ಚಿ ಪೋಷಕರಿಗೆ ನೀಡಿದ್ದು ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಅಪಹೃತ ಬಾಲಕಿಯ ತಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ತನ್ನ ಮಗಳನ್ನು ಅಮಿಷ ತೋರಿಸಿ ಅಪಹರಿಸಿದ್ದಾರೆ ಎಂದು ದೂರು ನೀಡಿದ್ದರು. ಈ ಹಿಂದೆಯೂ ಆರೋಪಿ ಶಹಬಾಝ್ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿದ್ದ. ಮನೆಯಿಂದ ನಾಪತ್ತೆಯಾಗಿದ್ದ ಬಾಲಕಿ ವಾಪಸ್ ಮನೆಗೆ ಬಂದ ಸಂದರ್ಭ ಮನೆಯವರು ಬಾಲಕಿಗೆ ಗದರಿಸಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಶಹಬಾಝ್ ಕೊಣಾಜೆ ಮೂಲದ ದಂಪತಿಗಳ ಸಹಾಯದೊಂದಿಗೆ ಬಾಲಕಿಯನ್ನು ಅಪಹರಿಸಿದ್ದು, ಮಗಳು ಮನೆಗೆ ಬಾರದೇ ಇದ್ದಾಗ ಬಾಲಕಿಯ ತಂದೆ ಠಾಣೆಗ ದೂರು ನೀಡಿದ್ದರು. ಸಂತ್ರಸ್ತ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಉಳ್ಳಾಲ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.