ಬೆಳ್ತಂಗಡಿ, ಜು. 07 (DaijiworldNews/TA): ತಾಲೂಕಿನಲ್ಲಿ ಕಳೆದೊಂದು ವಾರದಿಂದ ಉತ್ತಮ ಮಳೆ ಸುರಿಯುತ್ತಿದ್ದು, ಗುಡುಗು ಸಿಡಿಲು ಸಹಿತ ಮಳೆಯಾಗುತ್ತಿದೆ. ಈ ಮಧ್ಯೆ ಚಾರ್ಮಾಡಿ ಘಾಟಿ ಬೆಳ್ತಂಗಡಿ ಹಾಗೂ ಮೂಡಿಗೆರೆ ಭಾಗದಲ್ಲಿ ದಟ್ಟ ಮಂಜು ಆವರಿಸಿದ ಪರಿಣಾಮ ಘಾಟಿ ಪ್ರದೇಶದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ.

ಶನಿವಾರ ಹಾಗೂ ರವಿವಾರ ಹೆಚ್ಚಿನ ಪ್ರವಾಸಿಗರು ಹಾಗೂ ಭಕ್ತರು ದೇವರ ದರ್ಶನಕ್ಕೆ ಬರುವವರು ಇರುವುದರಿಂದ ವಾಹನ ದಟ್ಟಣೆ ಹೆಚ್ಚಿರುವುದು ಸಾಮಾನ್ಯ. ಶನಿವಾರ ರಾತ್ರಿಯಿಂದ ರವಿವಾರದ ವರೆಗೆ ಘಾಟಿ ಪ್ರದೇಶದಲ್ಲಿ ದಟ್ಟ ಮಂಜು ಆವರಿಸಿರುವುದು ಕಂಡು ಬಂತು. ಒಂದೆಡೆ ಮಳೆ ಹೆಚ್ಚಿದ್ದು, ಮತ್ತೂಂದೆಡೆ ಮುಂಜಾನೆ ಮಂಜಿನ ವಾತಾವರಣದಿಂದ ವಾಹನ ಸವಾರರಿಗೆ ಪ್ರಯಾಣ ಬಹಳ ತ್ರಾಸದಾಯಕವಾಗಿದೆ.
ತರಕಾರಿ ಸಹಿತ ದಿನನಿತ್ಯ ಅಗತ್ಯ ವಸ್ತುಗಳ ಸರಬರಾಜು ನಡೆಸುವ ವಾಹನಗಳು, ನಿತ್ಯ ಪ್ರಯಾಣಿಸುವ ಸಾರಿಗೆ ಬಸ್ ಗಳು ನಿಧಾನವಾಗಿ ಚಲಿಸಿದವು. ಚಾರ್ಮಾಡಿ ಘಾಟಿಯಲ್ಲಿ 5 ಅಡಿ ದೂರವೂ ಕಾಣದಂತಹ ಮಂಜು ಕವಿದಿರುವುದರಿಂದ ಸವಾರರು ಹೈರಾಣಾದರು.