ಮಂಗಳೂರು,ಜೂ. 07 (DaijiworldNews/AK): ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ನಡೆದ ಬಾಂಬ್ ಬೆದರಿಕೆ ಪ್ರಕರಣ ನಾಟಕೀಯ ತಿರುವು ಪಡೆದಿದೆ. ವಿಚಾರ ಸಂಕಿರಣವನ್ನು ತಪ್ಪಿಸಲು ಹುಸಿ ಕರೆ ಮಾಡಿದ ಆರೋಪದ ಮೇಲೆ ಸ್ನಾತಕೋತ್ತರ (ಪಿಜಿ) ವೈದ್ಯಕೀಯ ವಿದ್ಯಾರ್ಥಿನಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಜೂನ್ 4 ರಂದು ಬೆಳಿಗ್ಗೆ 8:45 ರ ಸುಮಾರಿಗೆ ಆಸ್ಪತ್ರೆಯ ಆವರಣದಲ್ಲಿ ಬಾಂಬ್ ಇಡಲಾಗಿದೆ ಎಂದು ಐದು ಬಾರಿ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಅನಾಮಧೇಯ ವ್ಯಕ್ತಿಯೊಬ್ಬರ ಬಾಂಬ್ ಬೆದರಿಕೆಯ ಕರೆಯ ಹಿನ್ನಲೆ ವೈದ್ಯರು, ಆಸ್ಪತ್ರೆ ಸಿಬ್ಬಂದಿ ಮತ್ತು ರೋಗಿಗಳಲ್ಲಿ ಆತಂಕ ಸೃಷ್ಟಿಯಾಗಿತ್ತು.
ಬೆದರಿಕೆಯ ನಂತರ, 25-30 ಪೊಲೀಸ್ ಸಿಬ್ಬಂದಿ, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳವನ್ನು ಒಳಗೊಂಡ ಬೃಹತ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಆಸ್ಪತ್ರೆ ಕಟ್ಟಡ, ಪಾರ್ಕಿಂಗ್ ಪ್ರದೇಶ ಮತ್ತು ಸುತ್ತಮುತ್ತಲಿನ ಆವರಣಗಳನ್ನು ಸುಮಾರು 10 ಗಂಟೆಗಳ ಕಾಲ ಸಂಪೂರ್ಣವಾಗಿ ಶೋಧಿಸಲಾಯಿತು. ಆದಾಗ್ಯೂ, ಯಾವುದೇ ಸ್ಫೋಟಕ ವಸ್ತುಗಳು ಅಥವಾ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ.
ನಂತರ, ಮೋನಿಕಾ ಚೌಧರಿಯೇ ನಮ್ಮ ಕಾಲೇಜಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ ಎಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದಾರೆ. ತನಿಖೆ ವೇಳೆ ತಾಂತ್ರಿಕ ವಿಶ್ಲೇಷಣೆ ನಡೆಸಿದಾಗ, ದೂರು ನೀಡಿದ ವಿದ್ಯಾರ್ಥಿನಿ ಡಾ.ಚಲಸಾನಿ ಮೋನಿಕಾ ಚೌಧರಿಯೇ ಬಾಂಬ್ ಬೆದರಿಕೆ ಹಾಕಿರುವುದು ತನಿಖೆಯಿಂದ ತಿಳಿದು ಬಂದಿದೆ. ನಿಗದಿತ ಸೆಮಿನಾರ್ ತಪ್ಪಿಸುವ ಉದ್ದೇಶದಿಂದ ಡಾ. ಮೋನಿಕಾ ಈ ಕರೆಗಳನ್ನು ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ.
ಜೂನ್ 7 ರಂದು ಆಕೆಯನ್ನು ವಶಕ್ಕೆ ಪಡೆಯಲಾಗಿದ್ದು, ಕರೆಗಳನ್ನು ಮಾಡಲು ಬಳಸಿದ್ದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಉಳ್ಳಾಲ ಪೊಲೀಸರು ಖಚಿತಪಡಿಸಿದ್ದಾರೆ.