ಬೆಳ್ತಂಗಡಿ, ಏ.28 (DaijiworldNews/AA): ವಾಲಿಬಾಲ್ ತರಬೇತಿದಾರನೊಬ್ಬ ಖಾಸಗಿ ಕಾಲೇಜಿನ 17 ವರ್ಷದ ವಿದ್ಯಾರ್ಥಿನಿಗೆ ಮೆಸೇಜ್ ಕಳುಹಿಸಿ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ ಆರೋಪದ ಮೇಲೆ ಯುವಕನೊಬ್ಬನನ್ನು ಬೆಳ್ತಂಗಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಆರೋಪಿ, ಖಾಸಗಿ ಕಾಲೇಜಿನ ವಾಲಿಬಾಲ್ ಆಟಗಾರ ಮತ್ತು ತರಬೇತುದಾರನಾಗಿದ್ದು, ಬಾಲಕಿಗೆ ಪದೇ ಪದೇ ಬೇಡದ ಸಂದೇಶಗಳನ್ನು ಕಳುಹಿಸುತ್ತಿದ್ದನು ಎನ್ನಲಾಗಿದೆ. ಇದರಿಂದ ಬೇಸತ್ತ ಬಾಲಕಿಯ ಕುಟುಂಬಸ್ಥರು ಪೊಲೀಸ್ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ. ಬಂಧಿತ ಆರೋಪಿಯು ಕಾರ್ಕಳ ನಿವಾಸಿ ಎನ್ನಲಾಗಿದೆ.
ಏ.26 ರಂದು ಆರೋಪಿ ಮೇಲೆ ಹಲ್ಲೆ ನಡೆಸಿ ಪೊಲೀಸರಿಗೆ ಒಪ್ಪಿಸಿದ ಇಬ್ಬರು ಹಿಂದೂ ಕಾರ್ಯಕರ್ತರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಯ ಸಮಯದಲ್ಲಿ, ಕಾರ್ಯಕರ್ತರು ಆತನ ಮೊಬೈಲ್ ಫೋನ್ ಅನ್ನು ಕಸಿದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಅದರಲ್ಲಿ ಆತ ವಿವಿಧ ಹುಡುಗಿಯರೊಂದಿಗಿದ್ದ ನೂರಾರು ವೀಡಿಯೊಗಳಿವೆ ಎಂದು ವರದಿಯಾಗಿದೆ.
ಹಲ್ಲೆಯ ನಂತರ, ಆರೋಪಿಯು ಪ್ರತಿದೂರು ದಾಖಲಿಸಿದ್ದು, ಇಬ್ಬರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಆರೋಪಿಗೆ ಇತರ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುವ ಅಭ್ಯಾಸವಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.