ಉಳ್ಳಾಲ, ಏ.28(DaijiworldNews/TA): ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು ಇದರ ವತಿಯಿಂದ ಉಳ್ಳಾಲ ತಾಲೂಕಿನ ಮೊಂಟೆಪದವಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಕೊಠಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ‘ಸಾಂತ್ವನ’ ವಿದ್ಯಾರ್ಥಿಗಳ ವಿಶ್ರಾಂತಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.


ಉದ್ಘಾಟನೆ ನೆರವೇರಿಸಿ ಮಾತನಾಡಿದ ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷ ನವಾಝ್ ಕಲ್ಲರಕೋಡಿ, ಮೊಂಟೆಪದವು ಸರ್ಕಾರಿ ಶಿಕ್ಷಣ ಸಂಸ್ಥೆಯಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇಲ್ಲಿ ವಿದ್ಯಾರ್ಥಿಗಳಿಗೆ ವಿಶ್ರಾಂತಿ ಕೊಠಡಿಯ ಅಗತ್ಯವಿತ್ತು. ಇದೀಗ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಕೊಠಡಿಯಲ್ಲಿ ವಿಶ್ರಾಂತಿ ಕೇಂದ್ರ ಸ್ಥಾಪಿಸುವ ಮೂಲಕ ಕೊಡುಗೆ ನೀಡಿದೆ ಎಂದರು. ಕೆ.ಪಿ.ಎಸ್. ವಿದ್ಯಾಸಂಸ್ಥೆಯ ಕಾರ್ಯಾಧ್ಯಕ್ಷ ಅಬ್ದುಲ್ ಜಲೀಲ್ ಮೋಂಟುಗೋಳಿ ಮಾತನಾಡಿ, ಸಂಘ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಪೂರಕವಾದ ಸಮಾಜಸೇವೆಯಲ್ಲಿ ತೊಡಗಿಸಿಕೊಂಡರೆ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಸಹಾಯವಾಗುತ್ತದೆ ಎಂದರು.
ಮೂಲತ್ವ ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಕೋಟ್ಯಾನ್ ಮಾತನಾಡಿ, ನಮ್ಮ ಸಂಸ್ಥೆಯು ಶೈಕ್ಷಣಿಕವಾಗಿಯೂ ಕೂಡಾ ಸಮಾಜಕ್ಕೆ ಕೊಡುಗೆ ನೀಡುತ್ತಾ ಬಂದಿದೆ. ಇದೀಗ ಮೊಂಟೆಪದವು ಶಾಲೆಯಲ್ಲಿ ವಿಶ್ರಾಂತಿ ಕೊಠಡಿಯ ನಿರ್ಮಾಣದ ಬೇಡಿಕೆಯು ಬಂದಾಗ ವಿದ್ಯಾರ್ಥಿಗಳಿಗಾ್ಗಿ ವಿಶ್ರಾಂತಿ ಕೊಠಡಿಗೆ ಬೇಕಾಗುವ ಎಲ್ಲಾ ಸೌಲಭ್ಯವನ್ನು ಒದಗಿಸಲಾಗಿದೆ ಎಂದರು. ಶಾಲಾಭಿವೃದ್ಧಿ ಮಂಡಳಿಯ ಮುರಳೀಧರ ಶೆಟ್ಟಿ ಮೋರ್ಲ, ಪಂಚಾಯತ್ ಸದಸ್ಯರಾದ ಮೊಹಮ್ಮದ್ ಹನೀಫ್ ಚಂದಹಿತ್ತು, ಪಂಚಾಯತ್ ಸದಸ್ಯ ರೆಹಮಾನ್ , ಕಾಲೇಜಿನ ಪ್ರಾಂಶುಪಾಲ ಸುರೇಶ್ ಎಂ.ಕೆ., ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರಮೀಳ , ಟ್ರಸ್ಟಿಗಳಾದ ಶೈನಿ, ಅಕ್ಷತಾ ಕದ್ರಿ, ಲಕ್ಷ್ಶೀಶ, ಕಲ್ಪನಾ ಕೊಟ್ಯಾನ್ , ಬಲ್ಮಠ ಕಾಲೇಜಿನ ಉಪನ್ಯಾಸಕರಾದ ಉಮೇಶ್ ಕೆ.ಆರ್ ಮೊದಲಾದವರು ಉಪಸ್ಥಿತರಿದ್ದರು.