ಮಂಗಳೂರು, ಏ.25 (DaijiworldNews/AA): ಕೆಎಸ್ಆರ್ಟಿಸಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಕಂಡಕ್ಟರ್ ಒಬ್ಬ ಮಹಿಳಾ ಪ್ರಯಾಣಿಕರೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತ್ವರಿತ ತನಿಖೆಗೆ ಆದೇಶಿಸಿದ್ದು, ನಿರ್ವಾಹಕನನ್ನು ಸೇವೆಯಿಂದ ವಜಾಗೊಳಿಸಲು ಸೂಚಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತರೊಬ್ಬರು ನೀಡಿದ ದೂರಿನ ಆಧಾರದ ಮೇಲೆ, ಕೊಣಾಜೆ ಪೊಲೀಸರು ಆರೋಪಿ ಬಾಗಲಕೋಟೆಯ ಮೂಲದ ಪ್ರದೀಪ್ ಕಾಶಪ್ಪ ನಾಯ್ಕರ್ (35) ಎಂಬಾತನನ್ನು ಬಂಧಿಸಿದ್ದಾರೆ. ಕೆಎಸ್ಆರ್ಟಿಸಿಯು ತಕ್ಷಣವೇ ಆರೋಪಿಯನ್ನು ಕರ್ತವ್ಯದಿಂದ ಅಮಾನತುಗೊಳಿಸಿದೆ.
ಏಪ್ರಿಲ್ 22 ರಂದು ಮುಡಿಪುವಿನಿಂದ ಸ್ಟೇಟ್ ಬ್ಯಾಂಕ್ಗೆ ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಈ ಘಟನೆ ನಡೆದಿತ್ತು. ಬಸ್ನಲ್ಲಿ ಇಬ್ಬರು ಯುವತಿಯರು ಮಹಿಳೆಯರಿಗಾಗಿ ಮೀಸಲಿಟ್ಟ ಆಸನದಲ್ಲಿ ಕುಳಿತಿದ್ದರು. ಈ ಪೈಕಿ ಒಬ್ಬರು ಪ್ರಯಾಣದ ವೇಳೆ ಮಲಗಿದ್ದರು. ಈ ಸಂದರ್ಭದಲ್ಲಿ ನಿರ್ವಾಹಕನು ಮಲಗಿದ್ದ ಮಹಿಳೆಯನ್ನು ಸಮೀಪಿಸಿ ಅನುಚಿತವಾಗಿ ವರ್ತಿಸಿದ್ದಲ್ಲದೆ, ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಚಾಲಕನ ಬಳಿ ಕುಳಿತಿದ್ದ ಪ್ರಯಾಣಿಕರೊಬ್ಬರು ಈ ಘಟನೆಯನ್ನು ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ನಂತರ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ತಕ್ಷಣವೇ ವೈರಲ್ ಆಗಿದೆ. ಇದರ ನಂತರ, ಕೊಣಾಜೆ ಪೊಲೀಸರು ತನಿಖೆ ಆರಂಭಿಸಿ ಕಂಡಕ್ಟರ್ ಅನ್ನು ಬಂಧಿಸಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ನೆಟ್ಟಿಗರು ನಿರ್ವಾಹಕನ ವರ್ತನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಸಾರ್ವಜನಿಕರ ಪ್ರತಿಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿದ ಕೆಎಸ್ಆರ್ಟಿಸಿ ಅಧಿಕಾರಿಗಳು ತಕ್ಷಣವೇ ಅಮಾನತು ಆದೇಶ ಹೊರಡಿಸಿದ್ದಾರೆ. ನಂತರ, ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮಾಹಿತಿ ನೀಡಲಾಗಿದ್ದು, ಅವರು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ತನಿಖೆ ನಡೆಸಿ, ನಿರ್ವಾಹಕನನ್ನು ಸೇವೆಯಿಂದ ವಜಾಗೊಳಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ.
ಘಟನೆಯನ್ನು ಅಸಹ್ಯಕರ ಮತ್ತು ಕ್ಷಮಿಸಲಾಗದ ಅಪರಾಧ ಎಂದು ಬಣ್ಣಿಸಿದ ಸಚಿವ ರಾಮಲಿಂಗಾರೆಡ್ಡಿ ಅವರು, ಆರೋಪಿಯನ್ನು ಸೇವೆಯಿಂದ ತೆಗೆದುಹಾಕಬೇಕು. ಪ್ರತಿಯೊಬ್ಬ ಮಹಿಳಾ ಪ್ರಯಾಣಿಕರನ್ನು ಗೌರವದಿಂದ ಕಾಣಬೇಕು. ಕೆಎಸ್ಆರ್ಟಿಸಿ ಚಾಲಕರು ಮತ್ತು ನಿರ್ವಾಹಕರ ಮೇಲೆ ಸಾರ್ವಜನಿಕರಿಗೆ ಅಪಾರ ನಂಬಿಕೆ ಇದೆ. ಕೆಲವೇ ವ್ಯಕ್ತಿಗಳ ದುಷ್ಕೃತ್ಯ ಇಡೀ ಸಂಸ್ಥೆಯ ಘನತೆಗೆ ಧಕ್ಕೆ ತರುತ್ತದೆ. ವಿಳಂಬವಿಲ್ಲದೆ ತನಿಖೆ ಪ್ರಾರಂಭಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರು, ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 74 ಮತ್ತು ಸೆಕ್ಷನ್ 75 ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಖಚಿತಪಡಿಸಿದ್ದಾರೆ.