ಉಳ್ಳಾಲ,ಏ.24 (DaijiworldNews/AK): ಜೀವನದಲ್ಲಿನ ಏರುಪೇರುಗಳಂತೆ ಮ್ಯಾರಥಾನ್ ಓಟದ ರಸ್ತೆಗಳು ಅನುಭವಕ್ಕೆ ಬಂತು ಎಂದು ದ.ಕ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಹೇಳಿದರು.




ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿಟ್ಟೆ ಸಮೂಹ ಸಂಸ್ಥೆಗಳ ಎನ್ ಎಸ್ ಎಸ್ ನ 1000 ವಿದ್ಯಾರ್ಥಿಗಳು ಎಲ್ಲರಿಗೂ ಪ್ರೇರಣೆಯಾಗುವ ರೀತಿಯಲ್ಲಿ ತುಂಬಾ ಅಚ್ಚುಕಟ್ಟಾಗಿ 5 ಕಿ.ಮೀ ಮ್ಯಾರಥಾನ್ನಲ್ಲಿ ಭಾಗವಹಿಸಿದ್ದಾರೆ.ಫಿಟ್ ಇಂಡಿಯಾ ಫಿಟ್ ಮೀ ಅನ್ನುವ ಸರಕಾರದ ಆಶಯ. ಹಲವು ವರ್ಷಗಳ ಹಿಂದೆ ಓಟದಲ್ಲಿ ಭಾಗಿಯಾಗಿರುವೆ. ವಯಸ್ಸಾದ ನಂತರ ಇದೇ ಮೊದಲ ಬಾರಿಗೆ ಭಾಗವಹಿಸಿರುವೆ ಎಂದು ದ.ಕ ಜಿಲ್ಲಾಧಿಕಾರಿ ಮುಲ್ಲೆ ಯ್ಯ ಮುಹಿಲನ್ ತಿಳಿಸಿದರು.
ಅವರು ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಹಾಗೂ ನಿಟ್ಟೆ ಪರಿಗಣಿಸಲ್ಪಟ್ಟ ವಿ.ವಿಯ ಕೇಂದ್ರ ಸರಕಾರದ ಫಿಟ್ ಇಂಡಿಯಾ, ಫಿಟ್ ಮೀ ಕಾರ್ಯಕ್ರಮದಡಿ ಆಯೋಜಿಸಲಾದ 5 ಕೆ ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿ ಬಳಿಕ ಕ್ಷೇಮ ದೇರಳಕಟ್ಟೆ ಕ್ಯಾಂಪಸ್ ನಿಂದ ಪಾನೀರು ಕ್ಯಾಂಪಸ್ ವರೆಗೂ 5 ಕಿ.ಮೀ ಮ್ಯಾರಥಾನ್ ನಲ್ಲಿ ಭಾಗವಹಿಸಿ ಮಾತನಾಡಿದರು.
ಚಾಲನೆ ನೀಡುವ ಸಂದರ್ಭ ಮಾತನಾಡಿ ವೈದ್ಯಕೀಯ ಕ್ಷೇತ್ರಗಳಲ್ಲಿ ದುಡಿಯುವರು ಮುಖ್ಯವಾಗಿ ದೈಹಿಕ ಸದೃಡತೆಯನ್ನು ಕಾಪಾಡಿಕೊಳ್ಳಬೇಕಿದೆ. ಅಲ್ಲದೆ ಸಮಾಜಕ್ಕೂ ಇದರ ಮಹತ್ವತೆಯ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯತೆ ಇದೆ . ದೈಹಿಕವಾಗಿ ಸದೃಢರಾಗಿ, ಆರೋಗ್ಯಯುತವಾಗಿದ್ದರೆ ಮಾತ್ರ ಆರೋಗ್ಯಯುತ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ. ಓಟ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೇ ನಿತ್ಯವೂ ಇದ್ದಲ್ಲಿ ದೇಹ, ಮನಸ್ಸಿಗೆ ಒಳ್ಳೆಯದು ಎಂಬ ಸಂದೇಶ ಸಾರಿದರು.
ನಿಟ್ಟೆ ಪರಿಗಣಿಸಲ್ಪಟ್ಟ ವಿ.ವಿ ಉಪಕುಲಾಧಿಪತಿ ಡಾ.ಎಂ ಶಾಂತಾರಾಮ ಶೆಟ್ಟಿ ಮಾತನಾಡಿ, ಆರೋಗ್ಯದ ಜಾಗೃತಿಗಾಗಿ ಹಮ್ಮಿಕೊಂಡಿರುವ ಮ್ಯಾರಥಾನ್ ಎಲ್ಲರ ಜೀವನದಲ್ಲಿ ಒಂದು ದಿನಕ್ಕೆ ಮೀಸಲಾಗಿರದೆ, ನಿತ್ಯವೂ ವ್ಯಾಯಾಮ, ಆಟ, ಓಟದ ಚಟುವಟಿಕೆಗಳಲ್ಲಿ ತುಂಬಿಕೊಳ್ಳುವಂತೆ ಪ್ರೇರಣೆಯಾಗಲಿ ಎಂದು ಹಾರೈಸಿದರು.
ಮ್ಯಾರಥಾನ್ಗೆ ಚಾಲನೆ ನೀಡುವ ವೇಳೆ ನಿಟ್ಟೆ ಪರಿಗಣಿಸಲ್ಪಟ್ಟ ವಿ.ವಿ ಉಪಕುಲಾಧಿಪತಿ ಡಾ.ಎಂ ಶಾಂತಾರಾಮ್ ಶೆಟ್ಟಿ, ಭಾರತ ಸರ್ಕಾರದ ರಾಷ್ಟ್ರೀಯ ಸೇವಾ ಯೋಜನೆಯ ವಲಯ ನಿರ್ದೇಶನಾಲಯದ ನಿರ್ದೇಶಕರಾದ ಡಿ.ಕಾರ್ತಿಗೇಯನ್, ರಾಜ್ಯ ಎನ್ ಎಸ್ ಎಸ್ ಅಧಿಕಾರಿ ಡಾ. ಪ್ರತಾಪ್ ಲಿಂಗಯ್ಯ, ಕುಲಪತಿ ಡಾ.ಎಂ.ಎಸ್ ಮೂಡಿತ್ತಾಯ, ಎನ್ ಎಸ್ ಎಸ್ ಸಂಯೋಜನಾಧಿಕಾರಿ ಪ್ರೊ.ಶಶಿಕುಮಾರ್ ಶೆಟ್ಟಿ, ವೈದ್ಯಕೀಯ ಅಧೀಕ್ಷಕಿ ಡಾ.ಸುಮಲತಾ ಆರ್ ಶೆಟ್ಟಿ, ಎ.ಬಿ ಶೆಟ್ಟಿ ದಂತ ಕಾಲೇಜಿನ ಡೀನ್ ಡಾ.ಮಿತ್ರಾ ಹೆಗ್ಡೆ, ನರ್ಸಿಂಗ್ ವಿಭಾಗ ಪ್ರಾಂಶುಪಾಲೆ ಫಾತಿಮಾ ಡಿಸಿಲ್ವ, ಆಡಳಿತ ವಿಭಾಗದ ಆಡಳಿತ ನಿರ್ದೇಶಕಿ ಸಾಯಿಪ್ರಸನ್ನಾ ಹೆಗ್ಡೆ, ನಿಟ್ಟೆ ಆರ್ಕಿಟೆಕ್ಚರ್ ಕಾಲೇಜು ಡೀನ್ ವಿನೋದ್ ಅರಾನ್ಹ , ನುಕ್ಸರ್ ನಿರ್ದೇಶಕ ಡಾ.ಅನಿರ್ಬಾನ್ ಚಕ್ರಬರ್ತಿ, ಪಠ್ಯಕ್ರಮ ನಿರ್ದೇಶಕ ನಾಗೇಶ್ ಪ್ರಭು, ಪತ್ರಿಕೋದ್ಯಮ ವಿಭಾಗದ ಡೀನ್ ಡಾ. ಸತ್ಯ, ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿಗಳಾದ ಪ್ರತಿಮಾ ರೈ, ಅನ್ಶಾ ರೈ, ಡಾ.ವರ್ಷಾ ಶೆಟ್ಟಿ ಉಪಸ್ಥಿತರಿದ್ದರು.
ವರ್ಷಾ ಶೆಟ್ಟಿ ನಿರೂಪಿಸಿದರು. ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಡೀನ್ ಡಾ.ಜಯಪ್ರಕಾಶ್ ಶೆಟ್ಟಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು.
ಮಹಿಳೆಯರ ವಿಭಾಗದಲ್ಲಿ ಡಾ.ಎನ್.ಎಸ್ ಎ.ಎಂ ಫಸ್ಟ್ ಗ್ರೇಡ್ ಕಾಲೇಜಿನ ಬಿ.ಕಾಂ ವಿದ್ಯಾರ್ಥಿನಿಯರಾದ ನಂದಿನಿ ಪ್ರಥಮ, ಪ್ರತೀಕ್ಷಾ ದ್ವಿತೀಯ ಹಾಗೂ ಸಾಕ್ಷಿ ಮೂರನೇ ಸ್ಥಾನ ಪಡೆದುಕೊಂಡರು.ಪುರುಷರ ವಿಭಾಗದಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಮೆಮೋರಿಯಲ್ ಟೆಕ್ನಾಲಜಿ ಸಂಸ್ಥೆಯ ಅಕ್ಷಯ್ ಗಾಂವ್ಕರ್ ಪ್ರಥಮ, ಡಾ.ಎನ್.ಎಸ್ ಎ.ಎಂ ಫಸ್ಟ್ ಗ್ರೇಡ್ ಕಾಲೇಜಿನ ಗುರುರಾಜ್ ನಾಯಕ್ ಹಾಗೂ ಹಾಸ್ಟೆಲ್ ಮೆನೇಜರ್ ಕಿರಣ್ ಕುಮಾರ್ ತೃತೀಯ ಸ್ಥಾನ ಪಡೆದುಕೊಂಡರು.
ಮ್ಯಾರಥಾನ್ ಪೂರ್ಣಗೊಳಿಸಿದ ಜಿಲ್ಲಾಧಿಕಾರಿ
ದೇರಳಕಟ್ಟೆಯ ನಿತ್ಯಾನಂದನಗರ ಕ್ಯಾಂಪಸ್ ನಿಂದ ಐದು ಕಿ.ಮೀ ದೂರದ ಪಾನೀರು ಕ್ಯಾಂಪಸ್ ವರೆಗೆ ನಿಟ್ಟೆ ಪರಿಗಣಿಸಲ್ಪಟ್ಟ ವಿ.ವಿ.ಯ ವಿದ್ಯಾರ್ಥಿಗಳು, ಸಿಬ್ಬಂದಿ ಜೊತೆಗೆ ಜಿಲ್ಲಾಧಿಕಾರಿಗಳು ಓಟದಲ್ಲಿ ಭಾಗವಹಿಸಿದರು. ನಿಧಾನವಾಗಿಯೇ ಓಡುತ್ತಾ ಸಾಗಿದ ಜಿಲ್ಲಾಧಿಕಾರಿ ಮುಲ್ಲೆ ಮುಹಿಲನ್ ಜೊತೆಗೆ ರಾಜ್ಯ ಎನ್ ಎಸ್ ಎಸ್ ಅಧಿಕಾರಿ ಡಾ. ಪ್ರತಾಪ್ ಲಿಂಗಯ್ಯ, ಕುಲಪತಿ ಪ್ರೊ.ಎಂ.ಎಸ್ ಮೂಡಿತ್ತಾಯ, ಆಡಳಿತ ವಿಭಾಗದ ಆಡಳಿತ ನಿರ್ದೇಶಕಿ ಸಾಯಿ ಪ್ರಸನ್ನಾ ಹೆಗ್ಡೆ, ಎನ್ ಎಸ್ ಎಸ್ ಸಂಯೋಜನಾಧಿಕಾರಿ ಶಶಿಕುಮಾರ್ ಶೆಟ್ಟಿ ಜೊತೆಯಾದರು.ದಣಿವರಿಯದ ಜಿಲ್ಲಾಧಿಕಾರಿಗಳು ಪುಟ್ಟ ಹೆಜ್ಜೆಗಳನ್ನು ಇಡುತ್ತಾ, ನೀರು ಕುಡಿಯುತ್ತಾ ಪಾನೀರು ಕ್ಯಾಂಪಸ್ ನಿಂದ ವಾಪಸ್ಸಾಗಿ ಮತ್ತೆ ನಿತ್ಯಾನಂದನಗರ(ದೇರಳಕಟ್ಟೆ ಕ್ಯಾಂಪಸ್) ನಲ್ಲಿ ಮ್ಯಾರಥಾನ್ ಪೂರ್ಣಗೊಳಿಸಿದರು.