ಮಂಗಳೂರು, ಏ.20(DaijiworldNews/TA): ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಎ.18ರಂದು ಕರ್ನಾಟಕ ಉಲಮಾ ಒಕ್ಕೂಟದ ನೇತೃತ್ವದಲ್ಲಿ ಅಡ್ಯಾರ್ ಕಣ್ಣೂರಿನ ಶಾ ಗಾರ್ಡನ್ನಲ್ಲಿ ನಡೆದ ಬೃಹತ್ ಪ್ರತಿಭಟನೆಯ ವೇಳೆ ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದರೆಂಬ ಆರೋಪದಲ್ಲಿ ಮೂವರ ವಿರುದ್ಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೃಷ್ಣಾಪುರದ ಜಲೀಲ್, ವಳಚ್ಚಿಲ್ನ ಫಝಲ್ ಮತ್ತು ಮೊಹಮ್ಮದ್ ಹನೀಫ್ ನೌಫಲ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನೇರ ವೀಕ್ಷಣೆ ಹಾಗೂ ಆರಂಭಿಕ ವೀಡಿಯೊ ವಿಶ್ಲೇಷಣೆಯ ಆಧಾರದ ಮೇಲೆ ಕರ್ತವ್ಯಕ್ಕೆ ನಿಯೋಜಿಸಲಾದ ಪೊಲೀಸರು ನೀಡಿರುವ ದೂರಿನಂತೆ ಮೂವರ ವಿರುದ್ಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ವೀಡಿಯೊ ದೃಶ್ಯಗಳ ವಿವರವಾದ ವಿಶ್ಲೇಷಣೆಯ ಆಧಾರದ ಮೇಲೆ ಇತರ ಆರೋಪಿಗಳನ್ನು ಗುರುತಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ನಗರ ಪೊಲೀಸ್ ಆಯುಕ್ತರ ಪ್ರಕಟನೆ ತಿಳಿಸಿದೆ.
ಇನ್ನು ಪ್ರತಿಭಟನಾಕಾರರ ಗುಂಪೊಂದು ಉದ್ದೇಶಪೂರ್ವಕವಾಗಿ ರಾಷ್ಟ್ರೀಯ ಹೆದ್ದಾರಿ 73ರ ಬದಿಯಲ್ಲಿ ಮತ್ತು ಮಧ್ಯದಲ್ಲಿ ಜಮಾಯಿಸಿ, ವಾಹನಗಳ ಮುಕ್ತ ಸಂಚಾರಕ್ಕೆ ಅಡ್ಡಿಪಡಿಸಿತು. ಪ್ರತಿಭಟನಾಕಾರರಲ್ಲಿ ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ನೀಡುವಂತೆ ಪೊಲೀಸರು ಪದೇ ಪದೇ ಮನವಿ ಮಾಡಿದ್ದರೂ, ಪದೇ ಪದೇ ಸೂಚನೆಗಳನ್ನು ನೀಡಿದ್ದರೂ, ಕೆಲವು ಪ್ರತಿಭಟನಾಕಾರರು ಸಂಚಾರಕ್ಕೆ ಅಡ್ಡಿಪಡಿಸುವ, ತುರ್ತು ಸೇವೆಗಳಿಗೆ ಅಡ್ಡಿಪಡಿಸುವ ಮತ್ತು ಸಾರ್ವಜನಿಕ ಸೇವಕರು ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಹಸ್ತಕ್ಷೇಪ ನಡೆಸಿದ್ದಾರೆಂದು ಆರೋಪಿಸಲಾಗಿದೆ.