ಮಂಗಳೂರು, ಏ.20 (DaijiworldNews/AA): ನಗರದ ಅತ್ತಾವರದ ಬಾಡಿಗೆ ಮನೆಯೊಂದರಲ್ಲಿ 10 ವರ್ಷಗಳ ಹಿಂದೆ ನಡೆದಿದ್ದ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶನಿವಾರ ಆದೇಶ ಹೊರಡಿಸಿದೆ.

ಕಾಸರಗೋಡು ಜಿಲ್ಲೆಯ ಚೆಂಗಳ ಗ್ರಾ.ಪಂ. ಚೆರ್ಕಳ ಮನೆ ನಿವಾಸಿ ಮೊಹಮ್ಮದ್ ಮುಹಜೀರ್ ಸನಾಫ್ (35), ವಿದ್ಯಾನಗರ ಅಣಂಗೂರು ಟಿ.ವಿ. ಸ್ಟೇಷನ್ ರಸ್ತೆ ನಿವಾಸಿ ಎ. ಮೊಹಮ್ಮದ್ ಇರ್ಷಾದ್ (34) ಮತ್ತು ಎ. ಮೊಹಮ್ಮದ್ ಸಫ್ಘಾನ್ (34) ಜೀವಾವಧಿ ಶಿಕ್ಷೆಗೆ ಒಳಗಾದ ಅಪರಾಧಿಗಳು.
ಕೇರಳದ ತಲಕ್ಕೇರಿಯ ನಾಫೀರ್ (24) ಮತ್ತು ಕೊಯಿಕೋಡ್ನ ಫಹೀಮ್ (೨೫) 10 ವರ್ಷಗಳ ಹಿಂದೆ ಕೊಲೆಯಾದವರು.
ಪ್ರಕರಣದ ಹಿನ್ನೆಲೆ:
ನಾಫೀರ್ ವಿದೇಶದಿಂದ ಚಿನ್ನದ ಗಟ್ಟಿಗಳನ್ನು ಕಳ್ಳ ಸಾಗಣೆಯ ಮೂಲಕ ತಂದಿದ್ದ. ಅದನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸಿದ ಸ್ನೇಹಿತ ಫಹೀಮ್ ಮತ್ತು ಆತನ ಸ್ನೇಹಿತರಾದ ಮೂವರು ಅಪರಾಧಿಗಳೊಂದಿಗೆ ಸೇರಿ ಮಾರಾಟ ಮಾಡಿದ್ದಾನೆ. ಮಾರಾಟ ಮಾಡಿ ಬಂದ ಹಣದ ವಿಚಾರದಲ್ಲಿ ನಫೀರ್ ಮತ್ತು ಫಹೀಮ್ ತಕರಾರು ತೆಗೆದಿದ್ದಾರೆ ಎಂಬ ದ್ವೇಷದಿಂದ ಅವರನ್ನು ಕೊಲೆ ಮಾಡುವ ಸಂಚು ರೂಪಿಸಿದ್ದರು.
ಚಿನ್ನ ಮಾರಾಟ ಮಾಡಿ ಬಂದ ಹಣದಲ್ಲಿ 2014ರ ಮೇ 15ರಂದು ಕಾಸರಗೋಡು ಜಿಲ್ಲೆಯ ಬೇಡಡ್ಕ ಗ್ರಾಮದ ಎಳನೀರಡ್ಕ ಶಂಕರಂಕಾಡು ಎಂಬಲ್ಲಿ 10 ಸೆಂಟ್ಸ್ ಜಾಗ ಖರೀದಿಸಿ ಅಪರಾಧಿ ಸಫ್ಘಾನ್ ಹೆಸರಿನಲ್ಲಿ ನೋಂದಣಿ ಮಾಡಿದ್ದರು. ಅಲ್ಲಿ ಯಾರಿಗೂ ಸಂಶಯ ಬಾರದಂತೆ ತೆಂಗಿನ ಸಸಿಗಳನ್ನು ನೆಡವುದಕ್ಕಾಗಿ ಹೊಂಡಗಳನ್ನು ತೆಗೆದಿದ್ದರು. ಅದರಲ್ಲಿ ಒಂದು ಹೊಂಡವನ್ನು ಸ್ವಲ್ಪ ದೊಡ್ಡದಾಗಿ ತೋಡಲಾಗಿತ್ತು. ನಂತರ ಅತ್ತಾವರದ ಉಮಾಮಹೇಶ್ವರ ದೇವಸ್ಥಾನದ ಹಿಂಬದಿಯಲ್ಲಿ 2014ರ ಜೂ.16ರಂದು ಮನೆಯೊಂದನ್ನು ಬಾಡಿಗೆ ಪಡೆದಿದ್ದರು. ಮರುದಿನ ಮೂವರು ಸೇರಿ ನಫೀರ್ ಮತ್ತು ಫಹೀಮ್ನನ್ನು ಅತ್ತಾವರದ ಮನೆಗೆ ಕರೆದುಕೊಂಡು ಬಂದು ಜತೆಯಾಗಿ ವಾಸವಾಗಿದ್ದರು. ಅವರಿಬ್ಬರೂ ಪ್ರತ್ಯೇಕ ಕೊಠಡಿಯಲ್ಲಿ ಉಳಿದಿದ್ದರು. ಇನ್ನುಳಿದ ಮೂವರು ಒಂದು ಕೊಠಡಿಯಲ್ಲಿ ಇದ್ದರು.
ಜು.1ರಂದು ಬೆಳಗ್ಗೆ ಕೋಣೆಯಲ್ಲಿ ಮಲಗಿದ್ದ ಫಹೀಮ್ನನ್ನು ಕುತ್ತಿಗೆಗೆ ಚೂರಿಯಿಂದ ಬಲವಾಗಿ ಇರಿದು ಕೊಲೆ ಮಾಡಿದ್ದಾರೆ. ಬಳಿಕ ಇನ್ನೊಂದು ಕೊಠಡಿಯಲ್ಲಿ ಮಲಗಿದ್ದ ನಫೀರ್ಗೂ ಕುತ್ತಿಗೆ, ಭುಜಕ್ಕೆ, ಎದೆಗೆ ಬಲವಾಗಿ ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ. ಆ ಬಳಿಕ ಇಬ್ಬರ ಮೃತದೇಹದ ಕೈಕಾಲುಗಳನ್ನು ಹಗ್ಗದಿಂದ ಮಡಚಿ ಕಟ್ಟಿ, ಪ್ಲಾಸ್ಟಿಕ್ ಗೋಣಿಯಲ್ಲಿ ತುಂಬಿಸಿ ಪ್ಯಾಕ್ ಮಾಡಿ ಬಾಡಿಗೆಗೆ ಪಡೆದುಕೊಂಡಿದ್ದ ಕಾರಿನಲ್ಲಿ ಕಾಸರಗೋಡಿಗೆ ಸಾಗಿಸಿ, ತಾವು ಖರೀದಿಸಿದ್ದ ಜಾಗದಲ್ಲಿ ಮೊದಲೇ ತೋಡಿ ಇಟ್ಟಿದ್ದ ಗುಂಡಿಗೆ ಹಾಕಿ ಮಣ್ಣು ಹಾಕಿ ಮುಚ್ಚಿದ್ದಾರೆ. ರಕ್ತ ಸಿಕ್ತ ಹಾಸಿಗೆಗಳಲ್ಲಿ ಒಂದನ್ನು ತುಂಡರಿಸಿ ಕಾಸರಗೋಡು ತಾಲೂಕಿನ ಚಂದ್ರಗಿರಿ ನದಿಯ ಸೇತುವೆಯ ಕೆಳಗೆ ಹರಿಯುವ ನೀರಿಗೆ ಹಾಕಿ ಸಾಕ್ಷ್ಯನಾಶ ಮಾಡಿದ್ದರು.
ಕೊಲೆ ಮಾಡಿದ ಬಳಿಕ ಮೂವರೂ ಆಗಾಗ್ಗೆ ರೂಮಿನಿಂದ ಕಾರಿನಲ್ಲಿ ಕೆಲವೊಂದು ವಸ್ತುಗಳನ್ನು ಸಾಗಿಸುತ್ತಿದ್ದರು. ಇದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜು. 6ರಂದು ಪಹೀಮ್ ಮಲಗಿದ್ದ ಕೋಣೆಯಲ್ಲಿದ್ದ ಹಾಸಿಗೆ, ತಲೆದಿಂಬು ಇತ್ಯಾದಿಗಳನ್ನು ತುಂಡರಿಸಿ ಕಪ್ಪು ಬಣ್ಣದ ಪ್ಲಾಸ್ಟಿಕ್ ಕಸದ ಚೀಲದಲ್ಲಿ ತುಂಬಿಸಿ ಸಾಕ್ಷ್ಯ ನಾಶಪಡಿಸಲು ಕೊಂಡೊಯ್ಯುತ್ತಿದ್ದಾಗ ಆಗಿನ ಸಿಸಿಬಿ ಪೊಲೀಸ್ ನಿರೀಕ್ಷಕರಾಗಿದ್ದ ವೆಲೆಂಟೈನ್ ಡಿ'ಸೋಜಾ ಅವರು ಸೊತ್ತುಗಳನ್ನು ವಶಪಡಿಸಿಕೊಂಡಿದ್ದರು. ಆರೋಪಿಗಳ ಸಹಿತ ಕಾರು ಮತ್ತು ಸೊತ್ತುಗಳನ್ನು ಪಾಂಡೇಶ್ವರ ಠಾಣೆಗೆ ಒಪ್ಪಿಸಿದ್ದರು. ಠಾಣಾಧಿಕಾರಿ ದಿಕನರ ಶೆಟ್ಟಿ ಅವರು ದಸ್ತಗಿರಿ ಮಾಡಿದ್ದರು.
ಪ್ರಕರಣ ಸಂಬಂಧ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ದೋಷಿಗಳೆಂದು ತೀರ್ಮಾನಿಸಿ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.