ಮಂಗಳೂರು,ಏ.16 (DaijiworldNews/AK): ರಾಜ್ಯದ ಇತಿಹಾಸ ಪ್ರಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆದಾಯದಲ್ಲಿ ಭಾರೀ ಏರಿಕೆಯಾಗಿದೆ.

2024-25ನೇ ಸಾಲಿನ ವಾರ್ಷಿಕ ಆದಾಯ 155.95 ಕೋಟಿ ರೂ. ಏರಿಕೆ ಆಗಿದೆ. ಕಳೆದ ವರ್ಷ ವಾರ್ಷಿಕ ಆದಾಯ 146.01 ಕೋಟಿ ರೂ. ಆಗಿತ್ತು. ಅಂದರೆ ಕಳೆದ ವರ್ಷಕ್ಕಿಂತ ಈ ಬಾರಿ 9.94 ಕೋಟಿ ರೂ. ಆದಾಯ ಏರಿಕೆ ಆಗಿದೆ. ಆ ಮೂಲಕ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತೆ ರಾಜ್ಯದ ಶ್ರೀಮಂತ ದೇವಸ್ಥಾನ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.
ಕಳೆದ ವರ್ಷವೂ ಪ್ರಥಮ ಸ್ಥಾನದಲ್ಲಿತ್ತು. ಈ ಭಾರಿ ಕೂಡ ವಾರ್ಷಿಕ ಆದಾಯದಲ್ಲಿ ಏರಿಕೆಯಿಂದಾಗಿ ಮತ್ತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತನ್ನ ಪ್ರಥಮ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ಅತೀ ಹೆಚ್ಚು ಆದಾಯ ಗಳಿಸುವ ದೇವಾಲಯಗಳ ಪಟ್ಟಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಪ್ರಥಮ ಸ್ಥಾನದಲ್ಲಿದ್ದರೆ, ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ದೇವಸ್ಥಾನ ಎರಡನೇ ಸ್ಥಾನದಲ್ಲಿದೆ. ಈ ದೇವಸ್ಥಾನದ ಆದಾಯ 31 ಕೋಟಿ ರೂ. ಅದೇ ರೀತಿಯಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನವು 20 ಕೋಟಿ ರೂ.ಗಳ ಅಂದಾಜು ಆದಾಯದೊಂದಿಗೆ ಮೂರನೇ ಸ್ಥಾನದಲ್ಲಿದೆ.