ಮಂಗಳೂರು, ಏ.15(DaijiworldNews/TA): ಬೆಲೆ ಏರಿಕೆಗೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯೇ ಮೂಲಕಾರಣವಾಗಿದ್ದು, ಇದು ಸಾಮಾನ್ಯ ಜನತೆಗೂ ತಿಳಿದ ವಿಚಾರವಾಗಿದೆ. ಹಾಗಾಗಿ ಇವುಗಳ ಬೆಲೆ ಏರಿಕೆ ಮಾಡಿದ ಬಿಜೆಪಿಗರ ನೀತಿ ಏನು? ಬಿಜೆಪಿಗರು ಸದ್ಯ ಯಾರ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ ಎಂಬುದನ್ನು ಸ್ವತಹ ಅವರೇ ತಿಳಿಸಬೇಕಿದೆ. ಬಿಜೆಪಿಯ ಜನಾಕ್ರೋಶ ಯಾತ್ರೆಗೆ ತಕ್ಕ ಉತ್ತರ ನೀಡಲು ಹಾಗೂ ಬೆಲೆ ಏರಿಕೆಗೆ ನೇರ ಕಾರಣವಾದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವತಿಯಿಂದ ರಾಜ್ಯಾದ್ಯಂತ ಎ.17ರಿಂದ ಪ್ರತಿಭಟನೆ ಆಯೋಜಿಸಲಾಗಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಎ.22ರಂದು ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಗತ್ಯ ವಸ್ತಗಳು ಸೇರಿದಂತೆ ಎಲ್ಲ ಬಗೆಯ ಬೆಲೆ ಏರಿಕೆ ಆಗಲು ಕೇಂದ್ರ ಸರ್ಕಾರದ ನೀತಿಗಳೇ ನೇರ ಕಾರಣ. ಇದು ಗೊತ್ತಿದ್ದೂ ರಾಜ್ಯದಲ್ಲಿ ತಾವು ಜೀವಂತ ಇದ್ದೇವೆ ಅಂತ ತೋರಿಸಿಕೊಡಲು ಬಿಜೆಪಿ ಜನಾಕ್ರೋಶ ಯಾತ್ರೆ ಮಾಡಿದೆ. ಬಿಜೆಪಿಯವರಿಗೆ ಧೈರ್ಯ ಇದ್ದರೆ ಬೆಲೆ ಏರಿಕೆ ಯಾರು ಮಾಡಿದ್ದು, ಎಂಬ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ.
ನಿಜವಾದ ಜನಾಕ್ರೋಶ ಇರೋದೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ. ಪಶು ಆಹಾರ, ರಸಗೊಬ್ಬರ ದರ ಏರಿಕೆ ಮಾಡಿದ್ದು, ಅಗತ್ಯ ವಸ್ತುಗಳಿಗೂ ಜಿಎಸ್ಟಿ ಏರಿಕೆ ಮಾಡಿದ್ದು ಕೇಂದ್ರ ಸರಕಾರ. ಆದರೆ ರಾಜ್ಯ ಕಾಂಗ್ರೆಸ್ ಸರಕಾರ ಯಾವುದೇ ಅಗತ್ಯ ವಸ್ತುಗಳ ಮೇಲೆ ಒಂದು ಪೈಸೆ ತೆರಿಗೆಯನ್ನೂ ಹೆಚ್ಚಿಸಿಲ್ಲ ಎಂದು ಅವರು ತಿಳಿಸಿದರು. ಈ ವೇಳೆ ಕಾಂಗ್ರೆಸ್ ಮುಖಂಡರಾದ ನಾಗೇಂದ್ರ, ಪ್ರೇಮ್ ಮತ್ತಿತರರು ಉಪಸ್ಥಿತರಿದ್ದರು.