ಉಳ್ಳಾಲ, ಏ.13 (DaijiworldNews/AA): ಉಳ್ಳಾಲದ ಮೊಗವೀರಪಟ್ಟಣದ ಶಿವಾಜಿ ಜೀವ ರಕ್ಷಕ ದಳದ ಸದಸ್ಯರು ಇಂದು ಮಧ್ಯಾಹ್ನ ಉಳ್ಳಾಲ ಕಡಲತೀರದಲ್ಲಿ ಮುಳುಗುತ್ತಿದ್ದ ನಾಲ್ವರು ಮಹಿಳೆಯರನ್ನು ರಕ್ಷಿಸಿದ್ದಾರೆ. ಸಕಾಲಿಕ ಕಾರ್ಯಾಚರಣೆ ಮತ್ತು ಧೈರ್ಯವನ್ನು ಮೆಚ್ಚಿ ಉಳ್ಳಾಲ ಪೊಲೀಸ್ ಇನ್ಸ್ಪೆಕ್ಟರ್ ವಿರುಪಾಕ್ಷ ಅವರು ಶಿವಾಜಿ ಜೀವ ರಕ್ಷಕ ದಳದ ಸದಸ್ಯರನ್ನು ಸನ್ಮಾನಿಸಿದ್ದಾರೆ.

ಬೆಂಗಳೂರಿನ ನಾಯಂಡನ ಹಳ್ಳಿಯಿಂದ ಆಗಮಿಸಿದ್ದ ಸವಿತಾ(38), ಸೌಮ್ಯ(39), ಬಿಂದು(20), ಪದ್ಮಿನಿ(38) ಮತ್ತು ಮಂಜುಳ(35) ಎಂಬ ಐವರು ಮಹಿಳೆಯರು ಕುತ್ತಾರು ಕೊರಗಜ್ಜನ ದೇವಸ್ಥಾನಕ್ಕೆ ಭೇಟಿ ನೀಡಿ ನಂತರ ವಿಹಾರಕ್ಕಾಗಿ ಉಳ್ಳಾಲ ಕಡಲತೀರಕ್ಕೆ ತೆರಳಿದ್ದರು.
ನೀರಿನಲ್ಲಿ ಆಟವಾಡುತ್ತಿದ್ದಾಗ, ನಾಲ್ವರು ಮಹಿಳೆಯರು ಬೃಹತ್ ಗಾತ್ರದ ಅಲೆಗಳಿಗೆ ಸಿಲುಕಿ ಮುಳುಗುವ ಅಪಾಯದಲ್ಲಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಶಿವಾಜಿ ಲೈಫ್ಸೇವಿಂಗ್ ತಂಡದ ಸದಸ್ಯರು ಸಮುದ್ರಕ್ಕೆ ಧುಮುಕಿ ನಾಲ್ವರು ಮಹಿಳೆಯರನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದರು.
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಉಳ್ಳಾಲ ಪೊಲೀಸರು ರಕ್ಷಿಸಲ್ಪಟ್ಟ ಮಹಿಳೆಯರನ್ನು ತಕ್ಷಣ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.