ಮಂಗಳೂರು, ಏ.12 (DaijiworldNews/AA): ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ದ.ಕ-ಉಡುಪಿ ಜಿಲ್ಲೆ ವತಿಯಿಂದ ಏ. 13ರಂದು ಬೆಳಗ್ಗೆ 7.30ರಿಂದ ಮಧ್ಯಾಹ್ನ 12 ಗಂಟೆಯ ವರೆಗೆ ಮಂಗಳೂರು ಲಾಲ್ ಬಾಗ್ನಿಂದ ಉರ್ವ ಮೈದಾನದ ವರೆಗೆ 'ಸಂಗೀತದೊಂದಿಗೆ ಸ್ವಚ್ಛತೆ' ಎಂಬ ವಿನೂತನ ಪರಿಕಲ್ಪನೆಯ ಜಾಗೃತಿ ಕಾರ್ಯಕ್ರಮ ನಡೆಯಲಿದೆ.


ಗುರುವಾರ ನಗರದ ಖಾಸಗಿ ಹೊಟೇಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕೇಶವ ಕಲ ಅವರು, ಒಕ್ಕೂಟವು ಸಂಗೀತ ಕಲಾವಿದರ ಶ್ರೇಯೋಭಿವೃದ್ಧಿ ಉದ್ದೇಶವನ್ನಿಟ್ಟು 17 ವರ್ಷಗಳ ಹಿಂದೆ ಸ್ಥಾಪನೆಯಾದ ಸಂಘಟನೆ. ಒಕ್ಕೂಟವು ಸಾಂಸ್ಕೃತಿಕವಾಗಿ ತೊಡಗಿಸಿದ್ದಲ್ಲದೆ, ಸಾಮಾಜಿಕವಾಗಿಯೂ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದಿದೆ. ಅದರಂತೆ ಎರಡನೇ ಬಾರಿಗೆ ಸಂಗೀತದೊಂದಿಗೆ ಸ್ವಚ್ಛತೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕಾಠ್ಯಕ್ರಮದ ಯೋಜನ ನಿರ್ದೇಶಕ ಜಗದೀಶ್ ಶೆಟ್ಟಿ ಬೋಳೂರು ಮಾತನಾಡಿ, ಈ ಕಾರ್ಯಕ್ರಮವನ್ನು ರೋಹನ್ ಕಾರ್ಪೊರೇಷನ್ ಆಡಳಿತ ನಿರ್ದೇಶಕ ರೋಹನ್ ಮೊಂತೇರೊ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸ್ವಚ್ಛತ ರಾಯಭಾರಿ ಶೀನ ಶೆಟ್ಟಿ ವಹಿಸಲಿದ್ದಾರೆ. ದಾರಿಯುದ್ದಕ್ಕೂ ದೇಶಭಕ್ತಿ, ಸಮೂಹಗಾನ ನಡೆಯಲಿದೆ, ಸುಮಾರು 300 ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಈ ಸಂದರ್ಭ ಗೌರವ ಸಲಹೆಗಾರ ತೋನ್ಸೆ ಪುಷ್ಕಳ್ ಕುಮಾರ್, ಉಪಾಧ್ಯಕ್ಷ ಧನುರಾಜ್, ಪ್ರಧಾನ ಕಾರ್ಯದರ್ಶಿ ರಾಮ್ ಕುಮಾರ್, ಕೋಶಾಧಿಕಾರಿ ಹರಿಣಿ, ಮಾಜಿ ಅಧ್ಯಕ್ಷರಾದ ಮಹಮ್ಮದ್ ಇಕ್ವಾಲ್, ರಮೇಶ್ ಸಾಲ್ಯಾನ್ ಮತ್ತಿತರರಿದ್ದರು.