ಕಾಸರಗೋಡು, ಏ.11 (DaijiworldNews/AA): ಮಂಜೇಶ್ವರ ಕುಂಜತ್ತೂರು ಪದವಿನ ಪಾಳು ಬಾವಿಯೊಂದರಲ್ಲಿ ಪತ್ತೆಯಾದ ಮೂಲ್ಕಿ ನಿವಾಸಿಯಾದ ಆಟೋ ರಿಕ್ಷಾ ಚಾಲಕನ ಮೃತದೇಹ ಮೇಲಕ್ಕೆತ್ತಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.



ಇಮದು ಬೆಳಿಗ್ಗೆ ಹತ್ತು ಗಂಟೆ ಸುಮಾರಿಗೆ ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಲಾಗಿದ್ದು, ಪೊಲೀಸರು ಮಹಜರು ನಡೆಸಿದ್ದಾರೆ. ದೇಹದಲ್ಲಿ ಹಲವಾರು ಇರಿತದ ಗಾಯಗಳು ಕಂಡು ಬಂದಿದ್ದು ಇದರಿಂದ ಕೊಲೆಗೈದು ಬಾವಿಗೆಸೆದಿರಬಹುದು ಎಂಬ ಅನುಮಾನ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಮೂಲ್ಕಿ ಕೊಳ್ನಾಡ್ ನಿವಾಸಿ ಆಟೋ ಚಾಲಕ ಮುಹಮ್ಮದ್ ಶರೀಫ್ (52) ರವರ ಮೃತದೇಹ ಕುಂಜತ್ತೂರು ಪದವಿನ ನಿರ್ಜನ ಪ್ರದೇಶದಲ್ಲಿ ಗುರುವಾರ ರಾತ್ರಿ ಪತ್ತೆಯಾಗಿತ್ತು. ನಿರ್ಜನ ಪ್ರದೇಶದಲ್ಲಿ ಆಟೋ ರಿಕ್ಷಾ ಸಂಶಯಾಸ್ಪದವಾಗಿ ವಾಲಿ ನಿಂತ ಸ್ಥಿತಿಯಲ್ಲಿ ಕಂಡುಬಂದ ಹಿನ್ನಲೆಯಲ್ಲಿ ಗಮನಿಸಿದಾಗ ರಕ್ತದ ಕಲೆಗಳು ಹಾಗೂ ಚಪ್ಪಲಿ ಕಂಡುಬಂದಿತ್ತು.
ಸಮೀಪದ ಬಾವಿಯನ್ನು ಗಮನಿಸಿದಾಗ ಮೃತ ದೇಹ ಪತ್ತೆಯಾಗಿತ್ತು. ಬಳಿಕ ಮಂಜೇಶ್ವರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಆಟೋ ರಿಕ್ಷಾ ನಂಬರ್ ಕೇಂದ್ರೀಕರಿಸಿ ತನಿಖೆ ನಡೆಸಿದಾಗ ಮುಹಮ್ಮದ್ ಷರೀಫ್ ಎಂದು ದ್ರಢಪಟ್ಟಿತ್ತು. ಮೂಲ್ಕಿ ಠಾಣೆಯಲ್ಲಿ ಆಟೋ ಚಾಲಕ ನಾಪತ್ತೆಯಾದ ಬಗ್ಗೆಯೂ ಮಾಹಿತಿ ಲಭಿಸಿತ್ತು. ಇದರಂತೆ ಮೂಲ್ಕಿ ಪೊಲೀಸರು ಶರೀಫ್ ರವರ ಸಂಬಂಧಿಕರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಸಂಬಂಧಿಕರು ಆಟೋ ರಿಕ್ಷಾ ಶರೀಫ್ ರವರದ್ದು ಎಂದು ಖಚಿತಪಡಿಸಿದ್ದರು. ಶುಕ್ರವಾರ ಬೆಳಿಗ್ಗೆ ಶ್ವಾನ ದಳ, ಫಾರೆನ್ಸಿಕ್ ತಜ್ಞರು ಹಾಗೂ ಪೊಲೀಸರು ಸ್ಥಳಕ್ಕೆ ತಲಪಿ ಮಾಹಿತಿ ಕಲೆ ಹಾಕಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೃತದೇಹ ಮೇಲಕ್ಕೆತ್ತಿ ಮಹಜರು ನಡೆಸಿದರು.
ಬುಧವಾರ ರಾತ್ರಿ ಮಂಗಳೂರಿನಲ್ಲಿ ಮೂವರು ಶರೀಫ್ ರವರ ಆಟೋ ರಿಕ್ಷಾ ಹತ್ತಿ ಬಂದಿದ್ದರು ಎನ್ನಲಾಗಿದೆ. ಈ ಬಗ್ಗೆ ಗಮನಿಸಿದ್ದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇವರನ್ನು ಕೇಂದ್ರೀಕರಿಸಿ ತನಿಖೆ ನಡೆಯುತ್ತಿದೆ.
ಬುಧವಾರ ಬೆಳಿಗ್ಗೆ ಎಂದಿನಂತೆ ರಿಕ್ಷಾ ಸಹಿತ ಮನೆಯಿಂದ ತೆರಳಿದ್ದ ಇವರು ಅಂದು ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಪತ್ನಿ ಕರೆ ಮಾಡಿದಾಗ ಮೊಬೈಲ್ ಸಂಪರ್ಕಕಕ್ಕೆ ಸಿಗದ ಕಾರಣ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಯುತ್ತಿದ್ದಂತೆ ಗುರುವಾರ ರಾತ್ರಿ ಕೇರಳ- ಕರ್ನಾಟಕ ಗಡಿ ಭಾಗದ ಕುಂಜತ್ತೂರು ಪದವು ಎಂಬಲ್ಲಿನ ಬಾವಿಯಲ್ಲಿ ಮೃತದೇಹ ಪತ್ತೆಯಾಗಿತ್ತು.