ಬಂಟ್ವಾಳ, ಏ.11(DaijiworldNews/ AK) : ನಿಯಮಬಾಹಿರವಾಗಿ ಅಧಿಕ ಜಲ್ಲಿ ಕಲ್ಲು ತುಂಬಿಸಿ ಅತೀವೇಗ ಮತ್ತು ಅಜಾಗರೂಕತೆಯಿಂದ ಲಾರಿಗಳನ್ನು ಓಡಿಸಿ ಅಪಘಾತವೆಸಗಿ ಜೀವಹಾನಿಯಾಗುವ ಭಯದಿಂದ ಆಕ್ರೋಶಭರಿತ ಸಾರ್ವಜನಿಕರಿಂದ ಲಾರಿಗಳನ್ನು ತಡೆಹಿಡಿದು ಪ್ರತಿಭಟಿಸಿದ ಘಟನೆ ಅಲ್ಲಿಪಾದೆ ಸಮೀಪದ ನಾವೂರ ಎಂಬಲ್ಲಿ ಇಂದು ಸಂಜೆ ನಡೆದಿದೆ.


ಅಕ್ರಮವಾಗಿ ಜಲ್ಲಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಸಾರ್ವಜನಿಕರು ತಡೆದ ಘಟನೆ ನಾವೂರು ಪಾಂಗೋಡಿ ಎಂಬಲ್ಲಿ ನಡೆದಿದ್ದು, ಸ್ಥಳಕ್ಕೆ ಆರ್ಟಿಓ, ಪೋಲೀಸರ ಆಗಮಿಸಿ ಮಾತುಕತೆ ನಡೆಸಿದ್ದಾರೆ.ಕಿರಿದಾದ ರಸ್ತೆಯಲ್ಲಿ ಅಧಿಕ ವೇಗ ಮತ್ತು ಓವರ್ ಲೋಡ್ ವಾಹನಗಳ ಸಂಚಾರ ಮಾಡುವುದರಿಂದ ಜೀವ ಭಯ ಕಾಡುತ್ತಿದೆ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ.
ಈ ದಿನ ಘನಗಾತ್ರದ ಲಾರಿಯ ಚಕ್ರ ಪಂಕ್ಚರ್ ಆಗಿ ರಸ್ತೆ ಬದಿಯಲ್ಲಿ ಇದ್ದವರಿಗೆ ಡಿಕ್ಕಿ ಹೊಡೆದು ಅಪಾಯವುಂಟಾಗುವ ಸಾಧ್ಯತೆ ಉಂಟಾದ ಘಟನೆ ನಡೆಯಿತು. ಇದರಿಂದ ಆಕ್ರೋಶಭರಿತರಾದ ಸಾರ್ವಜನಿಕರು ಸ್ಥಳಕ್ಕೆ ಜಮಾಯಿಸಿ ಅಧಿಕಾರಿಗಳ ಸಮ್ಮುಖದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕರು ಲಾರಿಯನ್ನು ತಡೆದು ನಿಲ್ಲಿಸಿ ನೋಡಿದಾಗ ಲಾರಿಯಲ್ಲಿ ದಾಖಲೆಗಿಂತಲೂ ಅತ್ಯಧಿಕ ಪ್ರಮಾಣದಲ್ಲಿ ಜಲ್ಲಿ ಲೋಡ್ ಮಾಡಲಾಗಿತ್ತು. ಇದರಿಂದ ರಸ್ತೆಯ ಡಾಮರು ಎದ್ದುಹೋಗುವ ಸಾಧ್ಯತೆಗಳ ಬಗ್ಗೆ ಅಕ್ರೋಶ ವ್ಯಕ್ತಪಡಿಸಿದ ಅವರು ಜೊತೆಗೆ ಓವರ್ ಲೋಡ್ ನ ಲಾರಿಗಳು ವಾಲಿಕೊಂಡು ಸಂಚರಿಸುವ ವೇಳೆ ಇತರ ವಾಹನಗಳಿಗೆ ಸೈಡ್ ನೀಡದೆ ತೊಂದರೆ ನೀಡುವ ಬಗ್ಗೆಯೂ ಉಲ್ಲೇಖ ಮಾಡಿದರು.
ಹಲವು ಬಾರಿ ಟಿಪ್ಪರ್ಗಳ ಅತಿವೇಗ ಮತ್ತು ಓವರ್ ಲೋಡ್ ಬಗ್ಗೆ ಎಲ್ಲಾ ಇಲಾಖೆಗಳಿಗೂ ದೂರು ನೀಡಲಾಗಿತ್ತು. ಆದರೆ ಈವರೆಗೆ ಯಾವುದೇ ಸ್ಪಂದನೆ ದೊರೆಯಲಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.