ಮಂಗಳೂರು, ಏ.10(DaijiworldNews/TA) : ದ.ಕ. ಜಿಲ್ಲೆಯ ಡಿಸಿ ಮನ್ನಾ ಭೂಮಿಯಲ್ಲಿ ಉಳಿಕೆಯಾಗಿರುವ ಸುಮಾರು 190.36 ಎಕರೆ ಭೂಮಿಯನ್ನು ಈಗಾಗಲೇ ಅರ್ಜಿ ಸಲ್ಲಿಸಿರುವ ನಿವೇಶನ ರಹಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಗಳ ಅರ್ಜಿದಾರರಿಗೆ ಮಂಜೂರು ಮಾಡಬೇಕು ಎಂದು ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ನಾಯಕ ಎಂ. ದೇವದಾಸ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಲಭ್ಯವಿ ರುವ ಡಿಸಿ ಮನ್ನಾ ಜಮೀನನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡದ ಅರ್ಜಿದಾರ ಅರ್ಹ ಫಲಾನುಭವಿ ಗಳಿಗೆ ಒತ್ತಾಯಿಸುವಂತೆ ಹಲವು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದ್ದರೂ ಸರಕಾರ ಗಮನ ಹರಿಸುತ್ತಿಲ್ಲ. ಜಿಲ್ಲೆಯಲ್ಲಿ ಒಟ್ಟು 8509.728 ಎಕರೆ ಡಿಸಿ ಮನ್ನಾ ಸ್ಥಳವನ್ನು ಮೀಸಲಾಗಿರಿಸಲಾಗಿತ್ತು. ಈ ಪೈಕಿ ವಿವಿಧ ಉದ್ದೇಶಗಳಿಗೆ 7366.175 ಎಕರೆ ಜಮೀನು ವಿಲೇ ಮಾಡಲಾಗಿದೆ.
ಉಳಿಕೆಯಾದ 1143.553 ಎಕರೆ ಭೂಮಿಯಲ್ಲಿ 977.195 ಎಕರೆ ಜಮೀನು ಅತಿಕ್ರಮಣವಾಗಿದೆ. ದ.ಕ. ಜಿಲ್ಲೆಯ 8 ತಾಲೂಕುಗಳಲ್ಲಿ 5590 ನಿವೇಶನರಹಿತ ಪರಿಶಿಷ್ಟ ಜಾತಿ ಹಾಗೂ ಪಂಗಡಗಳವರು ಅರ್ಜಿ ಸಲ್ಲಿಸಿದ್ದಾರೆ. ಕರ್ನಾಟಕ ಭೂ ಕಂದಾಯ ನಿಯಮಗಳು 1969ಕ್ಕೆ ತಿದ್ದುಪಡಿ ಮಾಡುವ ಮೂಲಕ ಪ್ರತ್ಯೇಕವಾಗಿ ಸ್ಪೆಷಲ್ ಗ್ರಾಂಟ್ ರೂಲ್ಸ್ 2017ನ್ನು ಜಾರಿಗೊಳಿಸುವ ಬದಲು ಉಪ ವಿಭಾಗಾಧಿಕಾರಿಗಳ ವರದಿಯಂತೆ ಲಭ್ಯ ಇರುವ ಡಿಸಿ ಮನ್ನಾ ಜಮೀನನ್ನು ಬಡತನ ರೇಖೆಗಿಂತ ಕೆಳಗಿನ ದಲಿತ ಕುಟುಂಬಗಳಿಗೆ ಮಾತ್ರ ವಿಸ್ತೀರ್ಣ ನಿಗದಿ ಪಡಿಸಿ ಮಂಜೂರು ಮಾಡುವಂತೆ ದ.ಕ. ಜಿಲ್ಲಾಧಿಕಾರಿ ಕಳೆದ ಡಿಸೆಂಬರ್ನಲ್ಲಿ ಸರಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರವನ್ನೂ ಬರೆದಿದ್ದಾರೆ.
ಆದರೆ ತಿಂಗಳು ಮೂರು ಕಳೆದರೂ ಈ ಬಗ್ಗೆ ಕ್ರಮ ವಹಿಸದಿರುವುದು ಖಂಡನೀಯ ಎಂದವರು ಹೇಳಿದರು. ಗೋಷ್ಟಿಯಲ್ಲಿ ಪ್ರಮುಖರಾದ ರಮೇಶ್ ಕೋಟ್ಯಾನ್, ಎಸ್.ಪಿ. ಆನಂದ, ಶೇಖರ್ ಚಿಲಿಂಬಿ, ಗಿರೀಶ್ ಉಳ್ಳಾಲ್, ಸುಧಾಕರ್ ಬಿ.ಎಸ್., ಪ್ರೇಮ್ ಬಳ್ಳಾಲ್ಬಾಗ್ ಮುಂತಾದವರು ಉಪಸ್ಥಿತರಿದ್ದರು.