ಕಾರ್ಕಳ, ಏ.10(DaijiworldNews/TA): ಐತಿಹಾಸಿಕ ಹಿನ್ನೆಲೆಯ ಆನೆಕೆರೆಯ ಪರಿಸರದ ಮಸೀದಿ ಮುಂಭಾಗದಲ್ಲಿ ತಿರುವು ರಸ್ತೆಯಲ್ಲಿ ನಿರ್ಮಾಣಗೊಳ್ಳುತ್ತಿದ್ದ ತಡೆಗೋಡೆ ಧರಾಶಾಹಿಯಾದ ಘಟನೆ ನಡೆದಿದೆ.

ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ತಡೆಗೋಡೆ ಧರೆಗೆ ಉರುಳಿದ್ದು ಈ ಬೆಳವಣಿಗೆಯಿಂದ ಕಾಮಗಾರಿಯ ಗುಣಮಟ್ಟದ ಬಗೆಗಿನ ಅನುಮಾನಕ್ಕೆ ಈ ಘಟನೆ ಕೈಗನ್ನಡಿಯಂತಿದೆ.
ಆನೆಕೆರೆ ಜಂಕ್ಷನ್ ನಿಂದ ಕಾರ್ಕಳ ಮುಖ್ಯಪೇಟೆಗೆ ಅಗಮಿಸುವ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಆನೆಕೆರೆ ಮಸೀದಿಯ ಎದುರುಗಡೆಯ ತಿರುವು ರಸ್ತೆ ಯು ಕಿರಿಯದಾಗಿದ್ದು, ಕೆಲವೊಂದು ಸಂದರ್ಭದಲ್ಲಿ ವಾಹನ ಸವಾರ ಹಾಗೂ ಚಾಲಕರ ನಿರ್ಲಕ್ಷ್ಯದಿಂದಾಗಿ ಇದೇ ಪರಿಸರದಲ್ಲಿ ಅಪಘಾತಗಳು ನಡೆದ ವರದಿಗಳೂ ಇವೆ.
ಈ ಕಾರಣದಿಂದಾಗಿ ಹಾಗೂ ಅಲ್ಲಿ ಇದ್ದಂತಹ ಹಳೆಯದಾದ ತಡೆಗೋಡೆಯ ಕಾಮಗಾರಿಯು ಇತ್ತೀಚೆಗೆ ಆರಂಭಿಸಲಾಗಿತ್ತು. ಕಾಮಗಾರಿ ಪೂರ್ಣಗೊಂಡರೆ ತಿರುವು ರಸ್ತೆ ಒಂದಿಷ್ಟು ಪ್ರಮಾಣದಲ್ಲಿ ವಿಸ್ತರಣೆಗೊಳ್ಳುತ್ತಿತ್ತು. ಕರ್ನಾಟಕ ಸರಕಾರ ಸಣ್ಣ ನೀರಾವರಿ ಇಲಾಖೆಯ ಅಧೀನಕ್ಕೊಳಪಟ್ಟ ಆನೆಕೆರೆಯಾಗಿದ್ದು, ತಡೆಗೋಡೆಯ ಕಾಮಗಾರಿಯನ್ನು ಅದೇ ಇಲಾಖೆ ನಿರ್ವಹಿಸಿದೆ.
ಇಲಾಖೆಯಲ್ಲಿ ಅಭಿಯಂತರರು ಇದ್ದು, ಅವರ ಬೇಜಾಬ್ದಾರಿಯಿಂದಾಗಿ ತಡೆಗೋಡೆ ಧರೆಶಾಹಿಯಾಗಿದೆ ಎಂಬುವುದು ಮೆಲ್ನೋಟಕ್ಕೆ ಕಂಡುಬರುತ್ತಿದೆ. ಕಾಮಗಾರಿ ಪರಿಪೂರ್ಣದ ಮುನ್ನವೇ ಈ ಘಟನೆ ನಡೆದಿರುವುದರಿಂದ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಲೇ ಬೇಕಾಗಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಈ ಘಟನಾವಳಿ ನಡೆದಿದ್ದೇ ಆಗಿದ್ದಲ್ಲಿ ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆದು ಹೋಗಿದೆ ಎಂಬ ಕಾರಣ ಮುಂದಿಡಲಾಗುತ್ತಿತ್ತೇ ಎಂಬ ಯಕ್ಷಪ್ರಶ್ನೆಯು ನಾಗರಿಕರಲ್ಲಿ ಮೂಡಿಸುತ್ತಿತ್ತು ಎಂದು ಹೇಳಲಾಗಿದೆ.